
ಆಡಳಿತ ಯಂತ್ರಕ್ಕೆ ಚುರುಕು
ಬೆಂಗಳೂರು, ಜೂ. ೪- ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರು ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರದ ಯೋಜನೆಗಳ ಜಾರಿಗೆ ಸಮರ್ಪಣಾ ಭಾವದಿಂದ ಕೆಲಸ ಮಾಡುವಂತೆ ತಾಕೀತು ಮಾಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ಕಟ್ಟಾಜ್ಞೆ ಮಾಡಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ರವರ ಜತೆಗೂಡಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಯೋಜನೆಗಳ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವತ್ತ ಗಮನ ಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು
ಸರ್ಕಾರದ ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ. ಭ್ರಷ್ಟಾಚಾರವನ್ನು ನಿಯಂತ್ರಿಸಿ ಕಡಿವಾಣ ಹಾಕಿ ಎಂದು ನಿರ್ದೇಶನ ನೀಡಿದರು.
ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೆ ಬೆನ್ನೆಲುಬು. ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿ ಅಭಿವೃದ್ಧಿ ಹಾದಿಗೆ ಮೆಟ್ಟಿಲಾಗಿ. ಜನ ಮೆಚ್ಚುವ ಹಾಗೆ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ, ನೀವು ಒಳ್ಳೆಯ ಹೆಸರು ಮಾಡಿ ಎಂದು ಕರೆ ನೀಡಿದರು.
ತಮ್ಮ ನೇತೃತ್ವದಲ್ಲಿ ನಿನ್ನೆ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಸೇರಿದಂತೆ ಆರು ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಬದ್ಧರಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಿ ರೌಡಿ ಎಡೆಮುರಿಕಟ್ಟಿ ಜೂಜು, ಡ್ರಗ್ಸ್ ದಂಧೆಗೆ ಆಸ್ಪದ ಕೊಡಬೇಡಿ ಶಾಂತಿ, ನೆಮ್ಮದಿ ಕಾಪಾಡಿ ಎಂದು ಸಭೆಯಲ್ಲಿದ್ದ ಪೊಲೀಸ್ ಹಿರಿಯ ಅಧಿಕಾರಿಗಳಿಗೂ ಸೂಚಿಸಿದರು.
ಜನಸ್ಪಂದನ ಜಾರಿ
ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಬೇಕು. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯವುದನ್ನು ತಪ್ಪಿಸಬೇಕು ಹಾಗಾಗಿ ಜನಸ್ಪಂದನ ಕಾರ್ಯಕ್ರಮವನ್ನು ಜಾರಿ ಮಾಡುತ್ತೇನೆ. ಅಧಿಕಾರಿಗಳು ಪ್ರತಿಜಿಲ್ಲೆಗಳಿಗೂ ಹೋಗಿ ಭೇಟಿ ನೀಡಿ, ಯೋಜನೆಗಳ ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು
ಅಧಿಕಾರಿಗಳು ಜನಪರ ಕೆಲಸ ಮಾಡಿದರೆ ಸರ್ಕಾರಕ್ಕೆ ಹೆಸರು, ನಿಮಗೂ ಹೆಸರು, ಅದರಂತೆ ನಿರ್ಲಕ್ಷ್ಯ ಧೋರಣೆ ತಾಳದೆ ಜನಪರ ಕೆಲಸಗಳನ್ನು ಕಟಿಬದ್ಧರಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೀವೆಲ್ಲಾ ಸರ್ಕಾರದ ಭಾಗವಾಗಿದ್ದೀರಿ. ನಿಮ್ಮ ಆತ್ಮಸಾಕ್ಷಿ ಒಪ್ಪುವ ಹಾಗೆ ಕೆಲಸ ಮಾಡಿ. ಆಡಳಿತದ ಹಾದಿತಪ್ಪಲು ನಾನು ಅವಕಾಶ ಕೊಡುವುದಿಲ್ಲ. ಕೆಲಸ ಮಾಡದ ಅಧಿಕಾರಿಗಳನ್ನು ನಾನುಸಹಿಸಿಕೊಳ್ಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು
ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ನನ್ನ ಸಂಕಲ್ಪಕ್ಕೆ ಕೈಜೋಡಿಸಿ ಕೆಲಸ ಮಾಡಿ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ಸಿಎಸ್‌ಆರ್ ದುರ್ಬಳಕೆ ತಪ್ಪಿಸಿ
ರಾಜ್ಯದಲ್ಲಿ ಸಿಎಸ್‌ಆರ್ ನಿಧಿ ದುರ್ಬಳಕೆ ಆಗುತ್ತಿದೆ. ರಾಜ್ಯದಲ್ಲಿ ದುಡಿದ ಹಣವನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿದ್ದಾರೆ. ಇದನ್ನು ಪತ್ತೆ ಮಾಡಿಸಿಎಸ್‌ಆರ್ ದುರ್ಬಳಕೆ ತಪ್ಪಿಸಿ. ಸಿಎಸ್‌ಆರ್ ನಿಧಿ ಬಳಸಿ ರಾಜ್ಯದ ಗ್ರಾಮೀಓ ಭಾಗದಲ್ಲಿ ಹೆಚ್ಚು ಶಾಲೆಗಳನ್ನು ಮಾಡೋಣ ಎಂದು ಅವರು ಹೇಳಿದರು.
ಚುನಾವಣಾ ಆಯೋಗ ರಾಜ್ಯದಲ್ಲಿ ಎಸ್‌ಐಆರ್ ಮಾಡುತ್ತಿದೆ. ಈ ಬಗ್ಗೆ ಎಚ್ಚರಿಕೆ ಇರಲಿ., ತಪ್ಪು ಆಗದಂತೆ ನೋಡಿಕೊಳ್ಳಿ, ವೋಟಿಂಗ್ ರೈಟ್ ಇಲ್ಲದಿದ್ದರೆ ಗ್ಯಾರಂಟಿ ಇರಲ್ಲ. ಎಲ್ಲರಿಗೂ ಮತದಾನ ಹಕ್ಕು ಕೊಡಿಸುವುದು ನಮ್ಮ ನಿಮ್ಮ ಜವಾಹ್ದಾರಿ ಆಗಿದೆ ಎಂದು ಹೇಳಿದರು.
ಯಾರು ಯಾರಿಗೆ ಮತ ಹಾಕುತ್ತಾರೋ ಬೇರೆ ವಿಚಾರ. ಆದರೆ ಎಲ್ಲರಿಗೂ ಮತದಾನದ ಹಕ್ಕು ಇರಬೇಕು ಎಂದು ಹೇಳಿದರು.


























