
ಬೆಂಗಳೂರು.ಜೂ೪: “ಇನ್ನೂ ಅಧಿಕೃತವಾಗಿ ಯಾವುದೇ ಖಾತೆಗಳ ಹಂಚಿಕೆಯಾಗಿಲ್ಲ. ಆದರೆ, ಇಂದು ಸಂಜೆಯೊಳಗಾಗಿ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ, ಕಾದು ನೋಡೋಣ,” ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಮತ್ತು ಸರ್ಕಾರ ನೀಡುವ ಜವಾಬ್ದಾರಿಗಳ ಕುರಿತು ಮಾತನಾಡಿದ ಅವರು, “ಯಾರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಕರ್ನಾಟಕದ ಜನತೆಯ ಸೇವೆ ಮಾಡಲು ಯಾವುದೇ ಸ್ಥಾನವೂ ಚಿಕ್ಕದಲ್ಲ. ಪಕ್ಷ ಅಥವಾ ಸರ್ಕಾರದ ಯಾವುದೇ ಜವಾಬ್ದಾರಿಯನ್ನಾದರೂ ನಿಭಾಯಿಸಲು ನಾವು ಸಿದ್ಧರಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ತಮಗೆ ಗೃಹ ಖಾತೆ ನೀಡುವ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ಯಾರೇ ಗೃಹ ಮಂತ್ರಿಯಾದರೂ ಸಹ ಕಾನೂನು ಮತ್ತು ಸಂವಿಧಾನದ ಚೌಕಟ್ಟನ್ನು ಮೀರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲವೂ ಸಂವಿಧಾನಬದ್ಧವಾಗಿಯೇ ನಡೆಯಬೇಕಾಗುತ್ತದೆ,” ಎಂದು ಹೇಳಿದರು,
“ಪ್ರಿಯಾಂಕ್ ಖರ್ಗೆಗೆ ಗೃಹ ಖಾತೆ ನೀಡಿದರೆ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರ ಫೈಲ್‌ಗಳು ಹೊರಗೆ ಬರುತ್ತವೆ” ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಅದೆಲ್ಲಾ ನನಗೆ ಗೊತ್ತಿಲ್ಲ. ಯತ್ನಾಳ್ ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ,” ಎಂದು ಹೇಳುವ ಮೂಲಕ ಈ ವಿವಾದದಿಂದ ದೂರ ಉಳಿದರು.


























