
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.04 ಪಟ್ಟಣದ ಇಂದಿರಾ ಗಾಂಧಿ ಬಾಲಕಿಯರ ಪ್ರೌಢಶಾಲೆಯನ್ನು ಮುಚ್ಚುವಂತಹ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಬಾಲಕಿಯರ ಪ್ರೌಢಶಾಲೆ ಬಂದ್ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆ ಹೋರಾಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಒಕ್ಕೂಟದ ನೇತೃತ್ವವಹಿಸಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ ಪಟ್ಟಣದಲ್ಲಿ1991 ರಲ್ಲಿ ಮಾಜಿ ಶಾಸಕರಾಗಿದ್ದ ಎನ್ ಟಿ ಬೊಮ್ಮಣ್ಣ ರವರು ಬಾಲಕಿಯರಿಗಾಗಿ ಪ್ರೌಢಶಾಲೆ ಆರಂಭಿಸಿದ್ದರು, ಆದರೆ ಈಗ ಆ ಶಾಲೆಯನ್ನ ಮುಚ್ಚಲು ಮುಂದಾಗಿರುವುದು ಖಂಡನೀಯ, ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಬೇಕು ಎನ್ನುವ ಉದ್ದೇಶದಿಂದ ಶಾಲೆ ಆರಂಭಿಸಿ, ನಂತರದ ದಿನಗಳಲ್ಲಿ ಶ್ರೀ ಲಕ್ಷ್ಮೀನಾರಾಯಣ ಹಾಗೂ ಶ್ರೀ ಆಂಜನೇಯ ಸ್ವಾಮಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾವರ್ಧಕ ಸಂಸ್ಥೆಗೆ ಬಿಟ್ಟು ಕೊಟ್ಟಿದ್ದರು, ಸರ್ಕಾರದ ಅನುದಾನಕ್ಕೆ ಒಳಪಟ್ಟ ಈ ಶಾಲೆಯಲ್ಲಿ ನೂರಾರು ಮಹಿಳೆಯರು ಭವಿಷ್ಯವನ್ನು ಕಂಡುಕೊಂಡಿದ್ದಾರೆ, ಈಗ ಸಂಸ್ಥೆಯ ಆಡಳಿತ ಮಂಡಳಿ ಯಾವುದೋ ಒಂದು ನೆಪ ಹೇಳಿ ಶಾಲೆಯನ್ನ ಮುಚ್ಚಲು ನಿರ್ಧರಿಸಿರುವುದು ಸರಿಯಲ್ಲ. ಶಿಕ್ಷಣ ಇಲಾಖೆ ಈ ಶಾಲೆಯನ್ನು ಮುಚ್ಚದಿರುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು,
ಸಂಘಟನೆಯ ಮತ್ತೊಬ್ಬ ಸಂಚಾಲಕ ಎನ್ ಎಂ ಗೌಸ್ ಮಾತನಾಡಿ ಪಟ್ಟಣದಲ್ಲಿ ಬಾಲಕಿಯರಿಗಾಗಿ ಪ್ರೌಢಶಾಲೆ ಇರುವುದು ಇದು ಒಂದೇ,ಈಗ ಈ ಪ್ರೌಢಶಾಲೆಯನ್ನು ಮುಚ್ಚಲು ಮುಂದಾಗಿರುವುದು ವಿದ್ಯೆ ಕಲಿಯಲು ಆಸಕ್ತಿ ಹೊಂದುವ ಬಾಲಕಿಯರಿಗೆ ಅನ್ಯಾಯ ಮಾಡಿದಂತಾಗಲಿದೆ, ಅದು ಅಲ್ಲದೆ ಸರಕಾರದ ಆದೇಶ ಇಲ್ಲದಿದ್ದರೂ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿಕೊಳ್ಳದಿರುವುದು ಅವರ ನಿರ್ಲಕ್ಷೆ ಧೋರಣೆ ಎತ್ತಿ ತೋರಿಸುತ್ತಿದೆ, ಕೂಡಲೇ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಂಡು ಶಾಲೆಯಲ್ಲಿ ವಿದ್ಯಾರ್ಥಿನಿಯರ ದಾಖಲಾತಿಗೆ ಇಲಾಖೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ರವರು ಶಾಲೆ ಮುಚ್ಚುವ ಬಗ್ಗೆ ಸರಕಾರದಿಂದ ಯಾವುದೇ ಆದೇಶ ಪತ್ರ ಬಂದಿರುವುದಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ದಾಖಲಾತಿ ಮಾಡಿಕೊಳ್ಳದೆ ಇದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ, ಎಂದರು
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯ ಮುಖಂಡರಾದ ಕಿನ್ನಾಳ ಸುಭಾಷ್, ನಾಗರಾಜ್, ಬಿ ಕೆ ಬಸವರಾಜ್, ಬಣಕಾರ ರಮೇಶ್, ಕರಿಬಸಯ್ಯ ಸೋಮನಾಥ ಭಜಂತ್ರಿ ಮೂಸಾ, ಇದಾಯತ್, ಮಲ್ಲಿಕಾರ್ಜುನ್, ತಿಪ್ಪಿಗುಂಡಿ ಮಂಜುನಾಥ, ಪತ್ರಿಯಲ್ಲಪ್ಪ, ಕುಮಾರ್ ನಾಯ್ಕ್, ಇತರರು ಇದ್ದರು























