
ನವದೆಹಲಿ, ಜೂ. ೪- ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದ್ದು, ಭಾರತೀಯ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಇರಾನ್ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯದ ಮೇಲಾಗುತ್ತಿರುವ ಒತ್ತಡವನ್ನು ತಗ್ಗಿಸಲು ಹಾಗೂ ದೇಶದ ಸಾಲದ ಮಾರುಕಟ್ಟೆಗೆ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ. ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟವು ಸುಗ್ರೀವಾಜ್ಞೆಯನ್ನು ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ತಕ್ಷಣ ಇದು ಜಾರಿಗೆ ಬರಲಿದೆ.
ಸದ್ಯದ ನಿಯಮವೇನಿತ್ತು?
ಪ್ರಸ್ತುತ ನಿಯಮಗಳ ಪ್ರಕಾರ, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ೧೨ ತಿಂಗಳಿಗಿಂತ ಹೆಚ್ಚು ಕಾಲ ಹೊಂದಿರುವ ಪಟ್ಟಿ ಮಾಡಲಾದ ಷೇರುಗಳು ಮತ್ತು ಬಾಂಡ್‌ಗಳ ಮೇಲೆ ಶೇಕಡಾ ೧೨.೫ ರಷ್ಟು ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದರೆ ಹೊಸ ನಿರ್ಧಾರದ ಅನ್ವಯ ಸರ್ಕಾರಿ ಬಾಂಡ್‌ಗಳ ಮೇಲಿನ ಈ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರೊಂದಿಗೆ, ಬಾಂಡ್‌ಗಳ ಮೇಲಿನ ಬಡ್ಡಿ ಆದಾಯಕ್ಕೆ ವಿಧಿಸಲಾಗುತ್ತಿದ್ದ ಶೇ. ೨೦ ರಷ್ಟು ವಿದೇಶಿ ತೆರಿಗೆ (Wiಣhhoಟಜiಟಿg ಖಿಚಿx) ಹೊರೆಗೂ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ತೈಲ ಬೆಲೆ ಏರಿಕೆಯ ನಡುವೆ, ೨೦೨೬ ರಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಸುಮಾರು ೨.೫ ಲಕ್ಷ ಕೋಟಿ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಇದು ಭಾರತೀಯ ಇತಿಹಾಸದಲ್ಲೇ ಅತಿ ದೊಡ್ಡ ಹೊರಹರಿವುಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿಯದಂತೆ ತಡೆಯಲು ಈ ಸುಧಾರಣೆ ಸಹಕಾರಿಯಾಗಲಿದೆ ಎನ್ನಲಾಗಿದೆ.
ಡಾಲರ್ ಒಳಹರಿವು: ಈ ರಿಯಾಯಿತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಬಾಂಡ್‌ಗಳು ಹೆಚ್ಚು ಆಕರ್ಷಕವಾಗಲಿದ್ದು, ದೇಶದೊಳಗೆ ಡಾಲರ್ ಹರಿವು ಹೆಚ್ಚಾಗಲಿದೆ. ಇದರಿಂದ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಾದಂತೆ ರೂಪಾಯಿ ಮೇಲಿನ ಒತ್ತಡ ಕಡಿಮೆಯಾಗಿ, ಅದರ ಮೌಲ್ಯ ಸ್ಥಿರಗೊಳ್ಳಲಿದೆ.
ಕಚ್ಚಾ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಚಾಲ್ತಿ ಖಾತೆ ಕೊರತೆ ಮತ್ತು ಹಣದುಬ್ಬರದ ಭೀತಿಯನ್ನು ಎದುರಿಸಲು ಈ ಕ್ರಮ ನೆರವಾಗಲಿದೆ.
ಮುಂದಿನ ದಿನಗಳಲ್ಲಿ ವಿದೇಶಿ ಹೂಡಿಕೆದಾರರನ್ನು ಸೆಳೆಯಲು ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಇನ್ನಷ್ಟು ಸರಣಿ ಸುಧಾರಣಾ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.


























