
೮ ಮಂದಿ ಸೆರೆ
ಬೆಂಗಳೂರು,ಮೇ.೨೦-ಡ್ರಗ್ಸ್ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಮೂವರು ವಿದೇಶಿಯರು, ಹೊರರಾಜ್ಯದ ಮೂವರು, ರಾಜ್ಯದ ಇಬ್ಬರು ಸೇರಿ ೮ ಮಂದಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೩೫ ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ.
ನವದೆಹಲಿಯ ನಲೋಟಿಯ ರೀನಾ ಅಲಿಯಾಸ್ ರೀನಾ ಯಾದವ್(೫೦) ನವದೆಹಲಿಯ ರಾಜೌರಿ ಗಾರ್ಡನ್ ನ ದೇಬಶಿಶ್ ಬ್ಯಾನರ್ಜಿ(೬೬)ಬೆಳ್ತಂಗಡಿ ಮೂಲದ ಚೂಡಸಂದ್ರದ ಜಿಮ್ ಟ್ರೈನರ್ ಮೊಹಮ್ಮದ್ ಮನ್ಸೂರ್(೩೦)ಸೆನಗಲ್ ದೇಶದ ಡಾನ್ಪಾ ಗಾರ್ಲೆಂಡ್(೩೯) ತಾಂಜೇನಿಯಾ ದೇಶದ ಹೆಗಡೆನಗರದ ಮ್ಯಾರ್ಗೆತ್ ಚಾಲೆ(೩೬)ನವದೆಹಲಿಯ ದಕ್ಷಿಣ ಜಿಲ್ಲೆಯ ದೀರಜ್ (೩೩) ನೈಜೀರಿಯಾ ದೇಶದ ಒಬಿನಜು ರೀಟಾ(೩೪) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಬ್ದುಲ್ ಸಮೀದ್(೩೮)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಇಬ್ಬರು ಮಹಿಳೆಯರು ಸೇರಿದ್ದು,ಅವರಿಂದ ೩೫ ಕೋಟಿ ಮೌಲ್ಯದ ೧೭ ಕೆ.ಜಿ ೫೦೦ ಗ್ರಾಂ ಎಂಡಿಎಂಎ,೪ ಮೊಬೈಲ್ ಗಳು,ಎರಡು ಕಾರುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೆಬ್ಬಾಳ ಪೊಲೀಸ್ ಇನ್ಸ್ ಪೆಕ್ಟರ್ ಭೈರ ಮತ್ತವರ ಸಿಬ್ಬಂದಿಗೆ ಕಳೆದ ಮೇ.೧೧ ರಂದು ಬಂದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿ ಹೆಬ್ಬಾಳದ ಆನಂದನಗರದ ಉನ್ನತಿ ಲೇಔಟ್ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್ ವೊಂದರ ಮುಂಭಾಗ ಕಾರಿನಲ್ಲಿ ಕುಳಿತು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತರು ವಿಚಾರಣೆಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ದಾಳಿ ಮುಂದುವರೆಸಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಓರ್ವ ವ್ಯಕ್ತಿ ಮತ್ತು ಓರ್ವ ಮಹಿಳೆ ಇಬ್ಬರು ದೆಹಲಿಯಿಂದ ಎಂಡಿಎಂಎ ಡ್ರಗ್ಸ್ ಅಪರಿಚಿತ ವ್ಯಕ್ತಿಯೋರ್ವನಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದನ್ನು ತಪ್ಪೊಪ್ಪಿಕೊಂಡಿದ್ದು,ಅವರಿಂದ ೪ ಕೆಜಿ ೧೮೦ ಗ್ರಾಂ ಎಂಡಿಎಂಎ. ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ೪ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಆರೋಪಿಗಳನ್ನು ಸುಧೀರ್ಘ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿ ದೊಡ್ಡಕನ್ನಳ್ಳಿಯ ಚೂಡಸಂದ್ರದ ಮತ್ತೊಬ್ಬ ಆರೋಪಿಯ ವಾಸದ ಮನೆಯಲ್ಲಿ ೧೦ ಕೆಜಿ ೧೨೦ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಇವರುಗಳಿಗೆ ಎಂಡಿಎಂಎಯನ್ನು ಸರಬರಾಜು ಮಾಡುತ್ತಿದ್ದ ವಿದೇಶದ ಓರ್ವ ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರು ವ್ಯಕ್ತಿಗಳನ್ನು ಮತ್ತು ದೆಹಲಿ ಮೂಲದ ಓರ್ವ ವ್ಯಕ್ತಿಯನ್ನು ವಿವಿಧ ದಿನಾಂಕಗಳಂದು ಹರಿಯಾಣ ಮತ್ತು ದೆಹಲಿಯಲ್ಲಿ ಬಂಧಿಸಲಾಗಿದೆ.
ನಾಲ್ವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಪಡೆದು ನಗರಕ್ಕೆ ಕರೆತಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ೧೦ ದಿನಗಳ ಕಾಲ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ಕೈಗೊಂಡಾಗ ಅವರ ನೀಡಿದ ಮಾಹಿತಿ ಆಧರಿಸಿ ಹೆಣ್ಣೂರಿನ ಆಸ್ಪತ್ರೆಯೊಂದರ ಬಳಿ ಮತ್ತೋರ್ವನನ್ನು ಬಂಧಿಸಿ ಆತನ ವಾಸದ ಮನೆಯಿಂದ ೩ ಕೆಜಿ ೨೦೦ ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಡ್ರಗ್ಸ್ ಫೆಡ್ಲರ್ ಗಳ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು,ಉತ್ತಮ ಕೆಲಸ ಮಾಡಿದ ಹೆಬ್ಬಾಳ ಪೊಲೀಸರ ತಂಡಕ್ಕೆ ಕಮೀಷನರ್ ನಗದು ಬಹುಮಾನ ಘೋಷಿಸಿದರು.
























