
ಧಾರವಾಡ, ಮೇ 20: ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕೆಲವು ಯೋಜನೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇಲಾಖೆಗಳು ಮಹಿಳಾ ಪರ ಕಾರ್ಯಕ್ರಮಗಳನ್ನು ಪರಸ್ಪರ ಸಮನ್ವಯದಿಂದ ಕಾರ್ಯಗತಗೊಳಿಸಬೇಕು. ಇಲಾಖೆಗಳ ಅಧಿಕಾರಿಗಳು ಮಾತೃ ಹೃದಯದಿಂದ ಕರ್ತವ್ಯ ನಿರ್ವಹಿಸಿದಾಗ ನೊಂದ ಮಹಿಳೆಯರ ಬದುಕಿನಲ್ಲಿ ನ್ಯಾಯ, ತೃಪ್ತಿಯ ಆಶಾಕಿರಣಗಳು ಮೂಡುತ್ತವೆ ಅಧಿಕಾರಿಗಳಲ್ಲಿ ಬದ್ದತೆ ಇದ್ದಾಗಮಾತ್ರ ಮಹಿಳಾ ಅಭೀವೃದ್ಧಿ ಕಾಣಲು ಸಾದ್ಯಾವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಹಿಳಾ ಸ್ಪಂದನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಬಂಧಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.
ಮಹಿಳೆಯರ ಸುರಕ್ಷತೆ ಹಾಗೂ ಸೈಬರ್ ಜಾಗೃತಿ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ಹೋಟೆಲ್‍ಗಳು ಹಾಗೂ ರೆಸ್ಟೋರೆಂಟ್‍ಗಳಲ್ಲಿ ಶೀ ಬಾಕ್ಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು. ಮತ್ತು ಮಹಿಳೆಯರ ಮೇಲಿನ ಕಿರುಕುಳ ಅಥವಾ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲಾಖೆ ಕಾರ್ಯಕ್ರಮಗಳನ್ನು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಮಹಿಳೆಯರ ಘನತೆಗೆ ಮತ್ತು ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ಸಂವೇದನಾಶೀಲರಾಗಿ ವರ್ತಿಸಬೇಕು ಎಂದು ಅವರು ತಿಳಿಸಿದರು.
ಶೀ ಬಾಕ್ಸ್, ಸ್ಥಳೀಯ ದೂರು ನಿವಾರಣಾ ಸಮಿತಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾಹಿತಿ ಫಲಕ ಅಳವಡಿಸಬೇಕು. ಮತ್ತು ಮಹಿಳೆಯರು ಯಾವುದೇ ರೀತಿಯ ಸಮಸ್ಯೆ ಎದುರಿಸಿದಾಗ ಧೈರ್ಯವಾಗಿ ದೂರು ನೀಡಲು ಅನುಕೂಲವಾಗುವ ವಾತಾವರಣ ಸಮಾಜದಲ್ಲಿ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಕ್ಕಾ ಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರ ರಕ್ಷಣೆ ಹಾಗೂ ಜಾಗೃತಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಪ್ರಶಂಸಿಸಿದರು. ಅಕ್ಕಾ ಪಡೆ ಸದಸ್ಯರೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಸಮಸ್ಯೆಗಳು ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಬೇಕು ಅವರು ಸಲಹೆ ನೀಡಿದರು.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಸಾಮಾಜಿಕ ಜಾಲತಾಣಗಳ ದುರುಪಯೋಗ, ಆನ್‍ಲೈನ್ ವಂಚನೆ ಹಾಗೂ ಡಿಜಿಟಲ್ ಸುರಕ್ಷತೆ ಕುರಿತು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಶಾಲೆ, ಕಾಲೇಜು, ಬಸ್ ನಿಲ್ದಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆ, ಪೆÇೀಲಿಸ್ ಠಾಣೆ, ಮಹಿಳಾ ಸಹಾಯವಾಣಿ, ಹೆಲ್ಪ್‍ಲೈನ್ ನಂಬರ್‍ಗಳನ್ನು ಅಳವಡಿಸಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪ್ರತಿಯೊಂದು ಇಲಾಖೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರ ಅಹವಾಲುಗಳಿಗೆ ಶೀಘ್ರ ಸ್ಪಂದನೆಯನ್ನು ನೀಡಬೇಕು. ಸಾರ್ವಜನಿಕರ ಮನವಿಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ ತ್ವರಿತವಾಗಿ ಬಗೆಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಮಾತನಾಡಿ, ಮಹಿಳೆಯರ ಸುರಕ್ಷತೆ, ಮಕ್ಕಳ ಕಲ್ಯಾಣ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ವೇಧಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೆÇಲೀಸ ವರಿμÁ್ಠಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತೆ ಶೃತಿ ಎನ್.ಎಸ್. ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇಲಾಖೆಯ ಸಿಬ್ಬಂದಿ ವರ್ಗದವರು, ವಿವಿಧ ಮಹಿಳಾ ಸಂಘಟನೆಗಳ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿವಿಧ ಜಿಲ್ಲೆಗಳ 200ರಕ್ಕೂ ಹೆಚ್ಚು ಮಹಿಳೆಯರಿಂದ ಅಹವಾಲು ಸ್ವೀಕಾರ: ಮಹಿಳಾ ಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರಿಂದ 200ಕ್ಕೂ ಹೆಚ್ಚು ವೈಯಕ್ತಿಕ ಅಹವಾಲುಗಳನ್ನು ಮಹಿಳಾ ಆಯೋಗದ ಅಧ್ಯಕ್ಷರು ಸ್ವೀಕರಿಸಿದರು. ಆಸ್ತಿ ವಿಷಯದಲ್ಲಿ ಗಂಡ, ಸಹೋದರರು, ಸಂಬಂಧಿಕರಿಂದ ವಂಚನೆ ಪ್ರಕರಣ, ಗಂಡ ನಿಂದ ಪರಿತ್ಯಕ್ತೆ ಮಹಿಳೆಯರು, ವಸತಿ, ಗಂಡನಿಂದ ಅನೈತಿಕ ಸಂಭಂದ, ಅತ್ತೆ ನಾದಿನಿಯರಿಂದ ಕಿರುಕುಳ, ಗಂಡನಿಂದ ಕುಟುಂಬ ನಿರ್ಲಕ್ಷ, ಜಮೀನು ವಿವಾದ, ಮಹಿಳಾ ಸುರಕ್ಷತೆ, ಸರ್ಕಾರಿ ಸೌಲಭ್ಯಗಳ ವಿಳಂಬ, ಪಿಂಚಣಿ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಹಿಳೆಯರು ತಮ್ಮ ಅಹವಾಲು, ಮನವಿಗಳನ್ನು ಸಲ್ಲಿಸಿದರು.
ಅಹವಾಲುಗಳನ್ನು ಒಂದೊಂದಾಗಿ ಪರಿಶೀಲಿಸಿದ ಅಧ್ಯಕ್ಷೆ ಡಾ, ನಾಗಲಕ್ಷ್ಮೀ ಚೌದರಿ ಅವರು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ತಕ್ಷಣ ಪರಿಹಾರ ಒದಗಿಸಿದರು. ತುರ್ತು ಅಗತ್ಯವಿರುವ ಪ್ರಕರಣಗಳನ್ನು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ವರ್ಗಾಯಿಸಿ, ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.





















