
ರಾಯಚೂರು,ಮೇ.೨೦-ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಮರಗಳು ಮತ್ತು ಕೊಂಬೆಗಳು ನೆಲಕ್ಕೆ ಉರುಳಿ ಬಿದ್ದವು. ಒಂದು ಕಾರು ಜಖಂಗೊಂಡಿದ್ದು, ಕಟ್ಟಿದ್ದ ಜಾಗದಲ್ಲೇ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ನಗರದ ವಾಲ್ಮೀಕಿ ವೃತ್ತದ ಬಳಿ ಬಲವಾದ ಗಾಳಿ ಬೀಸಿದ್ದರಿಂದ ವಿದ್ಯುತ್ ಕಂಬ ಬಿದ್ದು ಸ್ವಲ್ಪ ಹೊತ್ತು ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ರಸ್ತೆಯ ಮೇಲೆ ಮರಗಳು ಬಿದ್ದ ಕಾರಣ ಹಲವೆಡೆ ಸಂಚಾರವೂ ಅಸ್ತವ್ಯಸ್ತವಾಯಿತು.
ಅಲಿಗರ ಓಣಿ ನಿವಾಸಿ ಮಲ್ಲಿಕಾರ್ಜುನ ಕವಿತಾ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕ್ರೆಟಾ ಕಾರಿನ ಮೇಲೆ ದೊಡ್ಡ ಬೇವಿನ ಮರ ಬಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ಹಾನಿಯಾಗಿದೆ. ಘಟನೆಯ ಸಮಯದಲ್ಲಿ ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅಪಘಾತ ತಪ್ಪಿದೆ.
ಬಿರುಗಾಳಿಯ ತೀವ್ರತೆಯಿಂದಾಗಿ ನಗರದ ಹಲವಾರು ವಾರ್ಡ್ಗಳಲ್ಲಿ ಮನೆಗಳ ಛಾವಣಿಗಳು ಹಾರಿಹೋಗಿ ಜನರಲ್ಲಿ ಭಯಭೀತವಾಯಿತು. ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ, ಸಿಡಿಲು ಬಡಿದು ಪರಶುರಾಮ್ ಎಂಬ ರೈತನ ಎರಡು ಹಸುಗಳು ಮತ್ತು ಕೆಲವು ಕೋಳಿಗಳು ಸಾವನ್ನಪ್ಪಿವೆ. ಇದು ರೈತನ ಕುಟುಂಬಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ ಮತ್ತು ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದೆ.
ಮತ್ತೊಂದೆಡೆ, ನಗರದಲ್ಲಿ ನಡೆಯುತ್ತಿರುವ ವಿಭಜಕ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯಿಂದಾಗಿ, ಮಳೆನೀರು ರಸ್ತೆಗಳಲ್ಲಿ ಸಂಗ್ರಹವಾಗಿ, ವಾಹನ ಸವಾರರಿಗೆ ತೀವ್ರ ತೊಂದರೆಯಾಯಿತು.
ಹಲವು ಸ್ಥಳಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡು ಸಾರಿಗೆ ಕಷ್ಟಕರವಾಗಿದ್ದರಿಂದ, ಸಾರ್ವಜನಿಕರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




















