
ಸಂಜೆವಾಣಿ ನ್ಯೂಸ್
ಮೈಸೂರು, ಮೇ.20:- ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ. ಭ್ರಷ್ಟಾಚಾರ, ಸಾಲದ ಸುಳಿ, ಆಡಳಿತ ವೈಫಲ್ಯವೇ ಸರ್ಕಾರದ ನಿಜವಾದ ಸಾಧನೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಯಾವ ಸಾಧನೆ ಮಾಡಿದೆ ಎಂದು ಸಮಾವೇಶ ಮಾಡುತ್ತಿದ್ದಾರೆ? ಅನೀತಿ, ಅಧರ್ಮ, ಅರಾಜಕತೆ, ಭಷ್ಟಾಚಾರವೇ ಸಾಧನೆಯೇ? ಎಂದು ಪ್ರಶ್ನಿಸಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ವರ್ಷದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಕಚ್ಚಾಟ ಶುರುವಾಯಿತು. ಸಚಿವರು ಮತ್ತು ಶಾಸಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ನಿರಂತರವಾಗಿ ದೆಹಲಿ ಯಾತ್ರೆ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿದ್ದು, ಯಾವುದೇ ಹೊಸ ಅಭಿವೃದ್ಧಿ ಯೋಜನೆಗಳು ಜಾರಿಯಾಗಿಲ್ಲ ಎಂದು ದೂರಿದರು.
ಬೊಕ್ಕಸ ಖಾಲಿ: ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಜಾರಿ ಮಾಡಿದ್ದೇವೆ ಎಂದು ಬೀಗುವ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. 2023-24ರಲ್ಲಿ ಗ್ಯಾರಂಟಿಗಳಿಗೆ 36,000 ಕೋಟಿ ನೀಡಿದ್ದರೆ, 82,000 ಕೋಟಿ ಸಾಲ ಮಾಡಲಾಗಿದೆ. 2024-25 ರಲ್ಲಿ 56,000 ಕೋಟಿ ನೀಡಿ, 1.05 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2025-26ರಲ್ಲಿ 52,000 ಕೋಟಿ ವ್ಯಯಿಸಿ, 1.16 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 1.32 ಲಕ್ಷ ಕೋಟಿ ಸಾಲ ಮಾಡಲು ಅಂದಾಜಿಸಲಾಗಿದೆ. ಮೂರು ವರ್ಷದಲ್ಲಿ 5 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಕೇವಲ ಬಡ್ಡಿ ಪಾವತಿಗೇ ಸಾರ್ವಜನಿಕರ ತೆರಿಗೆ ಹಣದ ಪೈಕಿ 45,600 ಕೋಟಿ ವ್ಯಯಿಸಲಾಗುತ್ತಿದೆ. ಸಾಲ ಮಾಡಿ ಗ್ಯಾರಂಟಿ ಕೊಡುವುದೇ ಇವರ ಸಾಧನೆಯೇ ಎಂದು ವಾಗ್ದಾಳಿ ನಡೆಸಿದರು.
ಹಗರಣಗಳ ಸೂರಮಾಲೆ: ಸರ್ಕಾರದ ಸಚಿವರು ಸಾಲು ಸಾಲು ಹಗರಣಗಳಲ್ಲಿ ಮುಳುಗಿದ್ದಾರೆ. ಬಿ.ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ 127 ಕೋಟಿ ದೋಚಿದ್ದು, ಇನ್ನೂ 125 ಕೋಟಿ ರಿಕವರಿ ಆಗಿಲ್ಲ. ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಮತ್ತು ಪ್ರಭಾವ ದುರುಪಯೋಗದ ಸಂಬಂಧ ಇಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಮೀರ್ ಅಹಮದ್ ವಿರುದ್ಧ ಕಲ್ಯಾಣ ಕರ್ನಾಟಕ ನಿಧಿ ಹಂಚಿಕೆಯಲ್ಲಿ ಸ್ವಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ ಇದೆ. ಬೈರತಿ ಸುರೇಶ್, ರಹೀಮ್ ಖಾನ್ ವಿರುದ್ಧ ಅಮೃತ ಯೋಜನೆ ಹಾಗೂ ನಗರಾಭಿವೃದ್ಧಿ ನಿಧಿಯಲ್ಲಿ ಹಣ ದುರುಪಯೋಗದ ಆರೋಪಗಳು ತನಿಖಾ ಹಂತದಲ್ಲಿವೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಮೈಸೂರಿನ ಬಹುಕೋಟಿ ಮುಡಾ ಹಗರಣದ ಕಲೆ ಅಂಟಿಕೊಂಡಿದೆ. ಇದೇ ಇವರ ಸಾಧನೆ ಎಂದರು.
ಬೆಲೆ ಏರಿಕೆಯ ಬರೆ: ರಾಜ್ಯ ಸರ್ಕಾರ ಬಸ್ ದರ, ವಿದ್ಯುತ್ ದರ, ಶೇ.20 ರಷ್ಟು ಸ್ಟಾಂಪ್ ಡ್ಯೂಟಿ ಹಾಗೂ ಹಾಲಿನ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಹಾಲಿನ ಮೇಲಿನ 5 ರೂ ಸಬ್ಸಿಡಿ ನಿಲ್ಲಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಸುಮಾರು 350 ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶಿಸಿರುವುದು ಬಡವರ ಶಿಕ್ಷಣಕ್ಕೆ ಮಾರಕವಾಗಿದೆ ಎಂದರು.
ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯಾದ ಮೈಸೂರಿಗೆ ಸರ್ಕಾರದ ಕೊಡುಗೆ ಶೂನ್ಯ. ಬ್ರಾಂಡ್ ಬೆಂಗಳೂರು ಎಂದು ಕೇವಲ ಪೇಪರ್ನಲ್ಲಿ ಸಹಿ ಹಾಕುತ್ತಿರುವ ಸರ್ಕಾರ, ಕಳೆದ 26 ತಿಂಗಳಿಂದ ಬಿಬಿಎಂಪಿ ಗುತ್ತಿಗೆದಾರರ 22,000 ಕೋಟಿ ಬಾಕಿ ಬಿಲ್ ಪಾವತಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯ 300 ಕೋಟಿ ಬಿಲ್ ತಡೆಹಿಡಿಯಲಾಗಿದ್ದು, ಗುತ್ತಿಗೆದಾರರು ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾರೆ. ಬಿಲ್ ಬಿಡುಗಡೆಗೆ ಕಮಿಷನ್ ಕೇಳಲಾಗುತ್ತಿದೆ. ಬೆಂಗಳೂರಿನ ಜನತೆ ಟ್ರಾಫಿಕ್ ಹಾಗೂ ರಸ್ತೆ ಗುಂಡಿಗಳಿಂದ ಕಂಗಾಲಾಗಿದ್ದು, ಮಳೆಗೆ ಜನ ಕೊಚ್ಚಿ ಹೋಗುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಸೋಮಸುಂದರ್, ವಸಂತಕುಮಾರ್, ಬಿ.ಎಂ.ರಘು, ರುದ್ರಮೂರ್ತಿ, ಕಾರ್ತಿಕ್ ಮರಿಯಪ್ಪ, ಶಿವರಾಜ್, ಸಂತೋಷ್ ಇದ್ದರು.























