
ಕುಂದಗೋಳ,ಮೇ20 : ತಾಲೂಕಿನ ಶಿರೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೆತ್ತಿಕೊಳ್ಳಲಾದ ಶಿರೂರ-ಹಿರೇನರ್ತಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ನನ್ನ ಅಧಿಕಾರದ ಅವಧಿಯಲ್ಲಿ ಆದ್ಯತೆ ನೀಡಲಾಗಿದ್ದು, ಉತ್ತಮ ರಸ್ತೆ ಸಂಪರ್ಕದಿಂದ ಗ್ರಾಮೀಣ ಪ್ರದೇಶಗಳ ಜನರ ಸಂಚಾರ ಸುಗಮವಾಗುವುದರ ಜೊತೆಗೆ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಮಳೆಗಾಲದ ಸಂದರ್ಭಗಳಲ್ಲಿ ಎದುರಾಗುವ ಸಂಚಾರ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಶಿರೂರ – ಹಿರೇನರ್ತಿ ಭಾಗದ ಜನರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ,ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ರಸ್ತೆ ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಬುಗೌಡ ಪಾಟೀಲ, ಈಶ್ವರಪ್ಪ ಬೆಂಗೇರಿ, ಫಕ್ಕೀರಗೌಡ ಕುದರಿ, ಈಶ್ವರಗೌಡ ನಾಗನಗೌಡ್ರ, ಅಶೋಕ ಘೋರ್ಪಡೆ, ರುದ್ರಗೌಡ ಗೌಡಪ್ಪಗೌಡ್ರ, ಈಶ್ವರ ಸಾದರ, ಸುರೇಶ ಕೋಳೂರ, ಸಂತೋಷ ಬಡಿಗೇರ, ಸುರೇಶ ಬೆಂಗೇರಿ, ದಾನಪ್ಪ ಗಂಗಾಯಿ, ಬಸವರಾಜ ಕೊಪ್ಪದ, ಪೃಥ್ವಿರಾಜ್ ಕಾಳೆ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಶಿರೂರ ಹಾಗೂ ಹಿರೇನರ್ತಿ ಪಕ್ಷದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.





















