
ಸಂಜೆವಾಣಿ ನ್ಯೂಸ್
ಮೈಸೂರು ಆ.08:- ಆರೋಗ್ಯ ಇಲಾಖೆಯಲ್ಲಿ ಇಂಜಿನ್ ವೈಫಲ್ಯ ಹಾಗೂ ಇತರೆ ಕಾರಣಗಳಿಂದ ಹಳೆಯ ಆಂಬ್ಯುಲೆನ್ಸ್ ವಾಹನಗಳನ್ನು ವಿಲೇವಾರಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೂತನವಾಗಿ ಖರೀದಿಸಲಾದ 8 ಆಂಬ್ಯುಲೆನ್ಸ್‍ಗಳಿಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸಮಯೋಚಿತ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ತುರ್ತು ಚಿಕಿತ್ಸಾ ಸೇವೆಯನ್ನು ಜನರಿಗೆ ಶೀಘ್ರವಾಗಿ ತಲುಪಿಸಲು ಆಂಬ್ಯುಲೆನ್ಸ್ ಸೇವೆ ಅತ್ಯವಶ್ಯಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಆರ್. ನಗರದ ಶಾಸಕ ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಜಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

































