
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ,27- ಕಳೆದ ಹದಿನಾಲ್ಕು ವರ್ಷಗಳಿಂದ ನಿರಂತರವಾಗಿ ಧರ್ಮಸ್ಥಳದ ಸುತ್ತಮುತ್ತ, ಕುಟುಂಬದವರೂ ಸೇರಿದಂತೆ ಎಲ್ಲ ಜೀವಪರರು ಸತ್ಯ ಬಯಲಿಗೆಳೆಯಲು ಒತ್ತಾಯಿಸುತ್ತಿರುವ, ಸೌಜನ್ಯ ಪ್ರಕರಣ ಮತ್ತು ಇತರ ಅಸಹಜ ಸಾವುಗಳ ವಿರುದ್ಧ ಕರ್ನಾಟಕದಲ್ಲಿ ಕೇಳಿ ಬಂದ ಧ್ವನಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಬಲ ತುಂಬಿದೆ.
ಪದ್ಮಲತಾ ಪ್ರಕರಣದ ಕಾಲದಿಂದಲೂ ನ್ಯಾಯಕ್ಕಾಗಿ ಒತ್ತಾಯಿಸಿ ಹೋರಾಟ ನಡೆಸುತ್ತ ಬಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸರ್ವೊಚ್ಚ ನ್ಯಾಯಾಲಯದ ಆದೇಶವನ್ನು ಗೌರವದಿಂದ ಸ್ವಾಗತಿಸುತ್ತದೆ. ಕರ್ನಾಟಕ ಸರಕಾರವು ಯಾವುದೆ ಮರ್ಜಿ ಮುಲಾಜುಗಳಿಗೆ ಒಳಗಾಗದೇ ನಿಷ್ಪಕ್ಷಪಾತ, ನ್ಯಾಯಪರ ಮರು ತನಿಖೆ ನಡೆಸಲು ಬದ್ಧವಾಗಬೇಕೆಂದು ಆಗ್ರಹಿಸುತ್ತದೆ.
ಇಂತಹ ಬರ್ಭರ ಪ್ರಕರಣದಲ್ಲಿ ನ್ಯಾಯದ ಪರ ನಿಲ್ಲುವ ಬದಲು ಈ ವರೆಗಿನ ಎಲ್ಲ ಸರಕಾರಗಳು, ಅಪರಾಧಗಳನ್ನೇ ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದನ್ನು ಜನವಾದಿ ಎಂದಿನಿಂದಲೂ ಖಂಡಿಸುತ್ತಲೇ ಬಂದಿದೆ.
ಧರ್ಮಸ್ಥಳ ದ ಸುತ್ತಮುತ್ತ ನಡೆದ ನೂರಾರು ಜೀವ ಹತ್ಯೆ ಗಳನ್ನು ಅಸಹಜ ಸಾವೆಂಬ ಹಣೆಪಟ್ಟಿ ಕೊಟ್ಟು ಮುಚ್ಚಿ ಹಾಕಲು ಪ್ರಯತ್ನಿಸಿದ ರೀತಿ, ನಿರಪರಾಧಿ ಸಂತೋಷ್ ರಾವ್ ರವರನ್ನು ಸೌಜನ್ಯ ಪ್ರಕರಣದಲ್ಲಿ ಯಾರನ್ನೋ ರಕ್ಷಿಸಲು ಸಿಕ್ಕಿಹಾಕಿಸಿದ ರೀತಿಯನ್ನು ನಾವು ಖಂಡಿಸುತ್ತೇವೆ.
ಪ್ರಾರಂಭಿಕ ಹಂತದಿಂದಲೂ ನಾವು ಪ್ರತಿಪಾದಿಸಿದ ಅಂಶಗಳನ್ನೇ 2023 ರಲ್ಲಿ ಸಿ.ಬಿ.ಐ. ನ್ಯಾಯಾಲಯ ಮತ್ತು ಇದೀಗ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿವೆ ಎಂಬುದು ನಮಗೆ ಸಮಾಧಾನ ತಂದಿರುವ ಅಂಶಗಳಾಗಿವೆ. ಸೌಜನ್ಯ ಪ್ರಕರಣದಲ್ಲಿ ಇದುವರೆಗಿನ ಸರಕಾರಗಳು ಮತ್ತು ಅದರ ಆದೇಶದ ಮೇಲೆ ತನಿಖೆ/ ಪರೀಕ್ಷೆ ನಡೆಸಿದ ಸಂಸ್ಥೆಗಳು ನ್ಯಾಯ ದಕ್ಕದ ಹಾಗೆ ಸಾಕ್ಷ ನಾಶ ಮಾಡಿದ ಕಳಂಕ ಹೊತ್ತು ನಾಡಿನ ಸಾಕ್ಷಿ ಪ್ರಜ್ಞೆಗೇ ಅಪಚಾರವೆಸಗಿವೆ.
ಇಂದೀಗ ಸರ್ವೋಚ್ಚ ನ್ಯಾಯಾಲಯವು ಹಿಂದಿನ ತಪ್ಪುಗಳನ್ನು ಸ್ಪಷ್ಟವಾಗಿ ನಮೂದಿಸಿ ಯಾವುದೇ ವ್ಯತ್ಯಯಕ್ಕೆ ಅವಕಾಶ ನೀಡದೇ ಮೂರು ತಿಂಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಿದೆ.
ಅಲ್ಲದೇ ಈ ಹಿಂದಿನ ತನಿಖಾ ತಂಡದಲ್ಲಿ ಇದ್ದ ಯಾರನ್ನೂ ಒಳಗೊಳ್ಳದ ದಕ್ಷ, ತಾಂತ್ರಿಕ ಪರಿಣತಿಯ ತಂಡವಾಗಬೇಕೆಂದೂ ಎಚ್ಚರಿಸಿದೆ. ಇದೀಗ ಕರ್ನಾಟಕದ ನ್ಯಾಯಪರತೆಗೆ ಸರ್ವೋಚ್ಚ ನ್ಯಾಯಾಲಯ ಒಡ್ಡಿದ ಸವಾಲಾಗಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿ ಸರಕಾರದ್ದಾಗಿದೆ.
ತಕ್ಷಣವೇ ಕರ್ನಾಟಕ ಸರಕಾರ ಎಸ್.ಐ.ಟಿ. ರಚನೆ ಮಾಡಿದ್ದನ್ನು ಸ್ವಾಗತಿಸುತ್ತೇವೆ, ಆದರೆ ಅದರ ಬೆನ್ನಲ್ಲೇ ಎಸ್.ಐ.ಟಿ. ತಂಡದಲ್ಲಿ ಇರುವ ಅಧಿಕಾರಿಗಳ ಕುರಿತು ಎದ್ದ ಅಪಸ್ವರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.
ಈಗ ರಚಿಸಿರುವ ತಂಡದಿಂದ ನ್ಯಾಯಯುತವಾದ ತನಿಖೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ಜನಾಭಿಪ್ರಾಯ ವನ್ನು ಗೌರವಿಸಬೇಕು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಉನ್ನತ ಶ್ರೇಣಿಯ, ದಕ್ಷ, ಅಕಳಂಕ, ಸತ್ಯ ಮತ್ತು ನ್ಯಾಯನಿಷ್ಠ ಅಧಿಕಾರಿಗಳ ತಂಡವನ್ನೇ ನೇಮಿಸಿ, ಅದರ ಕಾರ್ಯಕ್ಷಮತೆಯನ್ನು ದೃಢಪಡಿಸಲು ಸಂಪೂರ್ಣ ಅವಕಾಶ ನೀಡಬೇಕು.
ಯಾವುದೇ ಹಂತದಲ್ಲಿಯೂ ಯಾರ ಪ್ರಭಾವಕ್ಕೂ ಒಳಗಾಗದೆ ಸತ್ಯವನ್ನು ಬಗೆದು ಹೊರತೆಗೆಯಲು ಅವಕಾಶ ನೀಡಬೇಕು. ಈ ಕಾರಣಗಳಿಗಾಗಿ ಉನ್ನತ ಶ್ರೇಣಿಯ, ತಜ್ಞ, ದಕ್ಷ,ಅಕಳಂಕ, ಅಧಿಕಾರಿಗಳನ್ನೊಳಗೊಂಡ ಎಸ್.ಐ.ಟಿ.ಯನ್ನು ಪುನರ್ ರಚಿಸಬೇಕೆಂದು ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತೇವೆ.
ರಾಜ್ಯದ ಜೀವಪರ ಮಹಿಳೆಯರು ಘನತೆಯ ಬದುಕಿನ ಮತ್ತು ನ್ಯಾಯಯುತ ನಡವಳಿಕೆಯ ಗ್ಯಾರಂಟಿ ಯನ್ನು ನಿರೀಕ್ಷೆ ಯಲ್ಲಿದ್ದಾರೆ. ಹುಸಿ ಮಾಡದೆ ನ್ಯಾಯನಿಷ್ಠರತೆಯನ್ನು ಸಾಬೀತು ಪಡಿಸಬೇಕೆಂದು ಒತ್ತಾಯಿಸುವುದಾಗಿ ರಾಜ್ಯ ಅಧ್ಯಕ್ಷರಾದ ಜೆ ಚಂದ್ರಕುಮಾರಿ, ಜಿಲ್ಲಾ ಅಧ್ಯಕ್ಷರಾದ ರುದ್ರಮ್ಮ , ಎ ಮಲ್ಲಮ್ಮ, ಅರುಣಾ ಪಾಂಡು,ಈರಮ್ಮ್ ಟಿ, ಮಹಾಂತಮ್ಮ್, ಈರಮ್ಮ ಎಂ ಕೆ, ತಿಳಿಸಿದ್ದಾರೆ.























