Home ಜಿಲ್ಲೆ ಮೈಸೂರು ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು: ಡಿಡಿಪಿಐ ಚಂದ್ರಪಾಟೀಲ್

ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು: ಡಿಡಿಪಿಐ ಚಂದ್ರಪಾಟೀಲ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.20-
ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು ಎಂದು ಚಾಮರಾಜನಗರ ಡಿಡಿಪಿಐ (ಆಡಳಿತ) ಚಂದ್ರ ಪಾಟೀಲ್ ಅವರು ಕರೆ ನೀಡಿದರು.


ಚಾಮರಾಜನಗರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಚಾಮರಾಜನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ–ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ಪಾತ್ರ ಕೇವಲ ಪಾಠ ಬೋಧನೆಗೆ ಸೀಮಿತವಾಗಬಾರದು ಎಂದು ತಿಳಿಸಿದರು. ಬದಲಾಗುತ್ತಿರುವ ಕಾಲಮಾನ, ಶಿಕ್ಷಣ ವ್ಯವಸ್ಥೆ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಮತ್ತು ಬೋಧನಾ ಕೌಶಲ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.


ಶಿಕ್ಷಕರು ಕೇವಲ ಶಿಕ್ಷಕರಾಗಿ ಉಳಿಯದೆ, ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ರುಪ್ಸಾ ಅಧ್ಯಕ್ಷ ಹಾಲನೂರು ಎಸ್. ಲೇಪಾಕ್ಷ ಅವರು, ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸಮಸ್ಯೆಗಳು, ಸೇವಾ ಭದ್ರತೆ ಹಾಗೂ ಅವರ ಹಿತಾಸಕ್ತಿಗಳ ಕುರಿತು ಮಾತನಾಡಿದರು. ಖಾಸಗಿ ಶಾಲಾ ಶಿಕ್ಷಕರಿಗೂ ಸೂಕ್ತ ಭದ್ರತೆ ಮತ್ತು ಅಗತ್ಯ ಸೌಲಭ್ಯಗಳು ದೊರೆಯಬೇಕೆಂದು ಅಭಿಪ್ರಾಯಪಟ್ಟ ಅವರು, ಶಿಕ್ಷಕರ ಹಿತಾಸಕ್ತಿಯ ವಿಚಾರದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ಕುಸ್ಮಾ ಕಾರ್ಯದರ್ಶಿ ಆದಿಲ್ ಪಾμÁ ಮಾತನಾಡಿ, ಶಿಕ್ಷಕರ ಜವಾಬ್ದಾರಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು. ಶಿಕ್ಷಕರು ತಮ್ಮ ಜ್ಞಾನ, ಬೋಧನಾ ಕೌಶಲ್ಯ ಹಾಗೂ ತಂತ್ರಜ್ಞಾನ ಅರಿವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಅಧ್ಯಕ್ಷÀ ಲಿಂಗರಾಜು ಅವರು ಮಾತನಾಡಿ, ಸರ್ಕಾರಿ ಶಿಕ್ಷಕರಿಗೆ ಲಭ್ಯವಾಗುತ್ತಿರುವ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಇತರೆ ಶಿಕ್ಷಕರ ಕಲ್ಯಾಣ ಸೌಲಭ್ಯಗಳ ವ್ಯಾಪ್ತಿಗೆ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ಸೇರಿಸಬೇಕು ಎಂದು ಆಗ್ರಹಿಸಿದರು.


ಖಾಸಗಿ ಶಾಲಾ ಶಿಕ್ಷಕರೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಕಲ್ಯಾಣ ನಿಧಿ, ಆರ್ಥಿಕ ನೆರವು, ಸೇವಾ ಭದ್ರತೆ ಹಾಗೂ ಇತರೆ ಶಿಕ್ಷಕರ ಕಲ್ಯಾಣ ಯೋಜನೆಗಳಲ್ಲಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕರ ಸೇವೆ, ತ್ಯಾಗ, ಬದ್ಧತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಾಜೇಂದ್ರನ್ ಮತ್ತು ಬಾಲಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುನಾಥ್ ಡಿ., ಮಾಜಿ ಗೌರವಾಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಕಾರ್ಯದರ್ಶಿ ಗಂಗಾಧರ, ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ಶಿಕ್ಷಕಿಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಸ್ಪಂದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಚಾಮರಾಜನಗರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.