
ಸಂಜೆವಾಣಿ ವಾರ್ತೆ
ಪಿರಿಯಪಟ್ಟಣ:ಜೂ.16:- ಸಮೀಪದ ಸುರಗಳ್ಳಿ ಗ್ರಾಮದ ನಿವಾಸಿ ಐಕಾನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಕೆ.ರವಿಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಬಳಿಕ ಗ್ರಾಮದ ಅರ್ಕನಾಥೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ಕೆ.ಮಹದೇವ್, ಕನ್ನಡ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಹಾಗೂ ಅಪ್ಪಾಜಿ ಸ್ವಾಮೀಜಿಗಳ ನೇತೃತ್ವದಲ್ಲಿ ರವಿಗೌಡ ಅಭಿಮಾನಿಗಳ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಂತರ ಮಾತನಾಡಿದ ಮಾಜಿ ಶಾಸಕ ಕೆ.ಮಹದೇವ್, ಎಸ್.ಕೆ.ರವಿಗೌಡ ಅವರು ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಜನಪರ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಬಡವರು, ವಿದ್ಯಾರ್ಥಿಗಳು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕನ್ನಡ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರವಿ ಗೌಡ ರವರು ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ನಾಡಿನ ಜನತೆಗೆ ಒಳಿತು ಮಾಡುವಂತಾಗಲಿ. ಭಗವಂತನು ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಸೇವಾ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಅಪ್ಪಾಜಿ ಸ್ವಾಮಿ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಅತ್ತರ್ ಮತ್ತಿನ್, ವಿದ್ಯಾಶಂಕರ್, ನಾಗರಾಜೇಗೌಡ, ಮಹೇಶ, ಶರತ್, ಶಿವಣ್ಣ, ಕಾಂತ, ಬಸವರಾಜು, ಸೈಯದ್ ಹಸೀಬ್, ಗೌಸಿರ್ ಖಾನ್, ಪಿ.ಸಿ.ಕೃಷ್ಣ, ಕೆ.ರಮೇಶ್, ನಾಗರಾಜ್, ಗಿರೀಶ, ಮಹದೇವ್, ವಸಂತ್, ಸೇರಿದಂತೆ ಅವರ ಅಭಿಮಾನಿಗಳು, ಗ್ರಾಮಸ್ಥರು ಇದ್ದರು.





























