
ಸಂಜೆವಾಣಿ ವಾರ್ತೆ
ಹುಣಸೂರು,ಜೂ.16-ಮೈಸೂರಿನಿಂದ ಹುಣಸೂರಿಗೆ, ಹುಣಸೂರಿಂದ ಮೈಸೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಸತ್ಯ ಎಂ. ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಒತ್ತಾಯಿಸಿದ್ದಾರೆ.
ಹುಣಸೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಹುಣಸೂರಿಗೆ ಪ್ರತಿದಿನ 10000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ನೌಕರರು ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ತಿರುಗಾಡುತ್ತಿದ್ದಾರೆ.
ಆರು ತಾಲೂಕುಗಳನ್ನು ಒಳಗೊಂಡ ಹುಣಸೂರು ಉಪವಿಭಾಗ ಕೇಂದ್ರವಾಗಿರುವುದರಿಂದ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳಿದ್ದು, ಅತಿ ಹೆಚ್ಚು ಜನಸಂದಣಿ ಇರುವುದರಿಂದ ಪಿರಿಯಾಪಟ್ಟಣ, ಹುಣಸೂರು ಮಾರ್ಗವಾಗಿ ಮೈಸೂರು ನಗರಕ್ಕೆ ಹೆಚ್ಚುವರಿ ಬಸ್ಸುಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕುಶಾಲನಗರ-ಮಡಿಕೇರಿ-ಮಂಗಳೂರಿಗೆ ತೆರಳುವ ಬಸ್ಸುಗಳಲ್ಲಿ ಹುಣಸೂರಿನ ಪ್ರಯಾಣಿಕರನ್ನು ಹತ್ತಬೇಡಿ ಎಂದು ದಬ್ಬಾಳಿಕೆಯಿಂದ ಇಳಿಸುತ್ತಿರುವ ಪ್ರಸಂಗವು ನಡೆಯುತ್ತಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಸತ್ಯಪ್ಪ, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಗಾರ್ಮೆಂಟ್ ಕಂಪನಿಗಳಿಗೆ ತೆರಳುವ ಮಹಿಳಾ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೈಸೂರು ಕಡೆಗೆ ಬಸ್ ಇಲ್ಲದೆ, ಒಂದೊಮ್ಮೆ ಮಡಿಕೇರಿ ಕಡೆಯಿಂದ ಬಸುಗಳು ಬಂದರೂ ನಿಲ್ಲಲು ಜಾಗ ಇಲ್ಲದೆ ತುಂಬಿ ತುಳುಕುತ್ತಿರುವ ಬಸ್ಸುಗಳಿಗೆ ಹತ್ತಲಾಗದೆ ಅಸಹಾಯಕತೆಯಿಂದ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ಸುಗಳ ಅಭಾವದಿಂದಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ತಮ್ಮ ಕಚೇರಿಗಳಿಗೆ ಬರಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸರ್ಕಾರ ಸರಿಯಾಗಿ 10 ಗಂಟೆಯ ಒಳಗಡೆ ಕಚೇರಿಗೆ ತಲುಪಬೇಕೆಂದು ಕಟ್ಟುನಿಟಿನ ಆದೇಶ ಕೂಡ ಮಾಡಿದೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಬಸ್ಸು ಸಿಗದೇ ಇರುವ ಕಾರಣ ಪರೀಕ್ಷೆಗಳನ್ನು, ತರಗತಿಗಳನ್ನು ತಪ್ಪಿಸಿಕೊಳ್ಳುವುದು ಹಾಗೂ ಶಿಕ್ಷಕರಿಂದ ಶಿಕ್ಷೆಗೊಳಗಾಗುವುದು ನಡೆಯುತ್ತಲೆ ಇದೆ. ಈ ಬಗ್ಗೆ ನಿಯಂತ್ರಣ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿರುವ ಸತ್ಯಪ್ಪ , ಸ್ಥಳೀಯ ಪ್ರತಿನಿಧಿಗಳಿಗೆ ಸಮಸ್ಯೆಯ ಬಗೆ ಅರಿವಿದ್ದರೂ, ಅವರ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗೆ ಮುಕ್ತಿ ಕಾಣದೆ, ನಮ್ಮ ಸಂಸ್ಥೆಗೆ ದೂರುಗಳು ಬರುತ್ತಿವೆ ಎಂದರು.
ತಾಲೂಕಿನ ಮಾಜಿ ಹಾಗೂ ಹಾಲಿ ಶಾಸಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ತಮ್ಮ ವರಿಷ್ಠರನ್ನು ಓಲೈಸಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ಸತ್ಯಪ್ಪ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಇನ್ನು 15 ದಿನಗಳ ಒಳಗಾಗಿ ಹೆಚ್ಚುವರಿ ಬಸ್ ಕಲ್ಪಿಸದೆ ಹೋದರೆ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಒಳಭಾಗದಲ್ಲಿ ಪ್ರಯಾಣಿಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.



























