
ಕೋಲಾರ ೧೬- ರೈತರು ಬೆಳೆ ಪರಿವರ್ತನೆಯ ಜೊತೆಗೆ ಮಣ್ಣು ಸಹ ಪರಿವರ್ತನೆಗೆ ಒತ್ತು ನೀಡಬೇಕು, ಕೃಷಿ ಜಮೀನನ್ನು ರಾಸಾಯನಿಕ ಮುಕ್ತವಾಗಿ ಪರಿವರ್ತಿಸಲು ಜಾಗೃತಿ ಮೂಡಿಸುವ ಮತ್ತು ಮಾರ್ಗದರ್ಶನ ಪಡೆಯಬೇಕು ರಸಾಯನಿಕ ಗೊಬ್ಬರ ದೂರವಿಡಿ ಸಾವಯವ ಪದ್ದತಿಗೆ ಒತ್ತು ನೀಡಬೇಕಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಅಂಜಿನಪ್ಪ ತಿಳಿಸಿದರು.
ನಗರದ ಹೊರವಲಯದ ಟಮಕದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಸೋಮವಾರ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ಗಮನ ಹರಿಸಬೇಕಾಗಿದೆ. ರಾಜ್ಯ ಸರ್ಕಾರವು ನೈಸರ್ಗಿಕ, ಸಾವಯವ ಕೃಷಿಯ ಜಾಗೃತಿ ಹಾಗೂ ಪ್ರೋತ್ಸಾಹಕ್ಕೆ ವಿಶೇಷವಾದ ಕ್ರಮಗಳನ್ನು ಕೈಗೊಳ್ಳಲಿದೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ಪ್ರಯೋಗಗಳನ್ನು ಹೆಚ್ಚಿಸಿವೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್ ಮಾತನಾಡಿ ನೈಸರ್ಗಿಕ ಕೃಷಿಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ತರಬೇತಿಯಲ್ಲಿ ವಿವಿಧ ಕೃಷಿ ಪಂಡಿತರು ವಿಜ್ಞಾನಿಗಳು, ಕೃಷಿಕರಿಗೆ ನೈಸರ್ಗಿಕ ಕೃಷಿ ಮಹತ್ವ, ತತ್ವಗಳು, ಮಣ್ಣಿನ ಮಹತ್ವ, ಮಣ್ಣಿನ ಪೋಷಕಾಂಶಗಳ ನಿರ್ವಹಣೆಗಾಗಿ ಜೀವಾಮೃತ ಬಳಕೆ, ಹೊದಿಕೆಯ ಮಹತ್ವ, ಜೈವಿಕಗೊಬ್ಬರಗಳ ಬಳಕೆ, ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ನೀರಿನ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಬೀಜ ಮತ್ತು ಸಸಿಗಳ ನಿರ್ವಹಣೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶಿವಾನಂದ ಹೊಂಗಲ ವಹಿಸಿದ್ದು ವೇದಿಕೆಯಲ್ಲಿ ರಾಜ್ಯ ಮಾವು ಮಂಡಳಿ ಅಧ್ಯಕ್ಷ ವಾಸುದೇವ್ ರಾವ್, ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಸಸ್ಯ ಸಂರಕ್ಷಣಾಧಿಕಾರಿ ಡಾ.ಜಯಸಿಂಹ, ತೋಟಗಾರಿಕೆ ವಿವಿ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ನಾಚೇಗೌಡ, ಬಿಜೆಪಿ ರೈತ ಮೋರ್ಚಾ ಮುಖಂಡರಾದ ಲಕ್ಷ್ಮಣಗೌಡ, ಬಿಜೆಪಿ ಶಿವಣ್ಣ, ಗೋಪಸಂದ್ರ ನಾರಾಯಣಸ್ವಾಮಿ, ಮುಂತಾದವರು ಇದ್ದರು.
























