Home ಜಿಲ್ಲೆ ಮೈಸೂರು ಬೆಳೆ ಹಾನಿ ಕುರಿತು ಅಧಿಕಾರಿಗಳು ನಿಖರವಾಗಿ ಸಮೀಕ್ಷೆ ನಡೆಸಿ

ಬೆಳೆ ಹಾನಿ ಕುರಿತು ಅಧಿಕಾರಿಗಳು ನಿಖರವಾಗಿ ಸಮೀಕ್ಷೆ ನಡೆಸಿ

ಸಂಜೆವಾಣಿ ನ್ಯೂಸ್
ಮೈಸೂರು: ಆ.08:-
ರಾಜ್ಯದಾದ್ಯಂತ ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾಗಿದ್ದು, ಈ ಸಂಬಂಧ ಪರಿಸ್ಥಿತಿಯನ್ನು ಅವಲೋಕಿಸಲು ಬೆಳೆ ಹಾನಿ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ. ಬೆಳೆ ಹಾನಿ ಕುರಿತು ಅಧಿಕಾರಿಗಳು ನಿಖರ ಸಮೀಕ್ಷೆ ನಡೆಸಿ ಎಂದು ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ತಿಳಸಿದರು.
ಹುಣಸೂರು ತಾಲ್ಲೂಕಿನ ಕೆಂಪನಹಳ್ಳಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿ ಮಾತನಾಡಿದ ಅವರು ಮಳೆಯ ಕೊರತೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಬೆಳೆಗಳ ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಹುಣಸೂರು ಭಾಗದಲ್ಲೂ ಹೊಗೆಸೊಪ್ಪು ಬೆಳೆಯ ಗುಣಮಟ್ಟ ಹಾಗೂ ಇಳುವರಿ ಕಡಿಮೆಯಾಗಿದೆ. ಸುಮಾರು 21,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗಿರುವ ಪೈಕಿ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗಿಲ್ಲ ಎಂದರು.


ಮೆಕ್ಕೆ ಜೋಳದ ಬೆಳೆಗೆ ಬಿಳುಸುಳಿ ರೋಗ ತೀವ್ರವಾಗಿ ಬಾಧಿಸುತ್ತಿದೆ. ಒಂದೇ ಭೂಮಿಯಲ್ಲಿ ನಿರಂತರವಾಗಿ ಒಂದೇ ರೀತಿಯ ಬೆಳೆ ಬೆಳೆಯುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಗ್ಗಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ರೋಗವು ತಡೆಯಲು ಕಷ್ಟಸಾಧ್ಯವಾಗಿದ್ದು, ಒಮ್ಮೆ ಬಂದರೆ ರೋಗ ಹೋಗಲಾಡಿಸಿ ಇಳುವರಿ ಹೆಚ್ಚಿಸುವುದು ಕಷ್ಟ. ಮೆಕ್ಕೆ ಜೋಳ ಅಥವಾ ಇತರೆ ಬೆಳೆಗಳ ನಷ್ಟಕ್ಕೆ ಹಾಗೂ ರಾಗಿ ಬೆಳೆಗೆ ಬೆಂಬಲ ಬೆಲೆ ಅಥವಾ ಪರಿಹಾರ ಒದಗಿಸುವ ಕುರಿತು ಸರ್ಕಾರದ ಹಂತದಲ್ಲಿ ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


ರೈತರಿಂದ ಖರೀದಿಸಲಾದ ರಾಗಿಯ ಪಾವತಿ ಬಾಕಿ ಉಳಿದಿರುವ ಬಗ್ಗೆ ಮನವಿಗಳು ಬಂದಿದ್ದು, ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಹಣವನ್ನು ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಜಮೆ ಮಾಡಲು ಸೂಚನೆ ನೀಡಲಾಗುವುದು.


ಎನ್.ಡಿ.ಆರ್.ಎಫ್ ನಿಯಮಗಳ ಅಡಿಯಲ್ಲಿ ಬೆಳೆ ರೋಗಗಳಿಗೆ ನೇರವಾಗಿ ಪರಿಹಾರ ನೀಡುವ ಯಾವುದೇ ನಿರ್ದಿಷ್ಟ ಅವಕಾಶ ಇಲ್ಲ. ಮಳೆಯಾಶ್ರಿತ ಬೆಳೆ ನಷ್ಟಗಳಿಗೆ ಮಾತ್ರ ನಿಯಮಗಳು ಅನ್ವಯಿಸುತ್ತವೆ. ಅಧಿಕಾರಿಗಳು ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ ವಾಸ್ತವ ವರದಿ ಸಲ್ಲಿಸಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.