
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 14:- ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಆಡಳಿತವನ್ನು ಮೆಚ್ಚಿರುವ ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಯನ್ನು ಸದೃಢಗೊಳಿಸಲು ಶ್ರಮಿಸಬೇಕು ಎಂದು ವಿಧಾನ ಪರಿಷತ್ನ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಅವರನ್ನು ಜಿಲ್ಲಾ ಬಿಜೆಪಿ ಸಮಿತಿಯಿಂದ ಅಭಿನಂದಿಸಿ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಯಾವುದೇ ಜನಪರ ಯೋಜನೆಯನ್ನು ಜಾರಿ ಮಾಡಲಿಲ್ಲ. ಪಂಚ ಗ್ಯಾರಂಟಿ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಿದ್ದೇ ಸಾಧನೆಯಾಗಿದೆ. ಈ ಇನ್ನೆರಡು ವರ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ನೀಡಲಾಗಿದೆ. ಇವರು ಸಹ ಜನಪರ ಆಡಳಿತ ನೀಡುವಲ್ಲಿ ವಿಫಲರಾಗುತ್ತಿದ್ದು, ಬಡವರ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಮತದಾರರು ಇದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲು ಬದಲಾವಣೆ ಗಾಳಿ ಬೀಸಿದೆ. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಇದಕ್ಕಾಗಿ ಇಂದಿನಿಂದಲೇ ಪಕ್ಷದ ಸಂಘಟನೆಯನ್ನು ಸಕ್ರಿಯಗೊಳಿಸಭೇಕು ಎಂದರು.
ಪಕ್ಷದ ವರಿಷ್ಟರ ಸಹಕಾರದಿಂದ ಅತ್ಯಂತ ಹಿಂದುಳಿದ ಸಮುದಾಯದ ವ್ಯಕ್ತಿಯಾಗಿರುವ ನನ್ನನ್ನು ವಿಧಾನ ಪರಿಷತ್ಗೆ ಅಭ್ಯರ್ಥಿ ಮಾಡಿದ್ದಾರೆ. ನಮ್ಮ ಶಾಸಕರು ಮತ ನೀಡುವ ಮೂಲಕ ನಾನು ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ದೊರೆಯುತ್ತದೆ. ಸಣ್ಣಪುಟ್ಟ ಜಾತಿಗಳು ಹಾಗೂ ಕಾಯಕ ಸಮಾಜಕ್ಕೆ ಅಧಿಕಾರ ನೀಡುವ ಮೂಲಕ ಅಂಭೇಡ್ಕರ್ ಅವರ ಆಶಯವನ್ನು ಈಡೇರಿಸುತ್ತಿವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್ಕುಮಾರ್ ಮಾತನಾಡಿ, ಮೈಸೂರು ಭಾಗದ ರಘು ಕೌಟಿಲ್ಯ ಅವರಿಗೆ ಪಕ್ಷ ಹಾಗೂ ವರಿಷ್ಠರು ವಿಧಾನ ಪರಿಷತ್ಗೆ ಆಯ್ಕೆ ಮಾಡುತ್ತಿರುವುದು ಸಂತಸ ಎಂದಿದೆ. ಕಾಯಕ ಸಮಾಜದಿಂದ ಬಂದ ರಘು ಅವರಿಗೆ ಆ ವರ್ಗಗಳ ಸಂಕಷ್ಟ ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ವಿಧಾನ ಪರಿಷತ್ಗೆ ಆಯ್ಕೆಯಾಗುವ ಜೊತೆಗೆ ಎರಡು ಜಿಲ್ಲೆಗಳಲ್ಲಿ ಬಿಜೆಪಿಯನ್ನು ಸಂಘಟಿಸಲು ಶ್ರಮವಹಿಸಲಿದ್ದಾರೆ. ಅವರ ಸೇವೆ ಮತ್ತಷ್ಟು ನಮ್ಮ ಜಿಲ್ಲೆಗೆ ದೊರೆಯಲಿ. ಹೆಚ್ಚಿನ ಬಹುಮತದಿಂದ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್. ಬಾಲರಾಜು. ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಹಳ್ಳಿ ಪಿ. ವೃಷಬೇಂದ್ರಪ್ಪ, ಮುಡ್ನಾಕೂಡು ಪ್ರಕಾಶ್, ಹೊನ್ನುರು ಮಹದೇವಸ್ವಾಮಿ, ಡಾ. ಎ.ಆರ್. ಬಾಬು, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಶಿವಣ್ಣ, ನಟರಾಜು, ವಿರೇಂದ್ರ, ಮೊದಲಾಧವರು ಇದ್ದರು.




























