
ಸಂಜೆವಾಣಿ ನ್ಯೂಸ್
ಮೈಸೂರು, ಜೂ.15:- ಸಹಜ ಸಮೃದ್ಧ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ಸಹಜ ಸೀಡ್ಸ್ ಆಶ್ರಯದಲ್ಲಿ ನಂಜರಾಜ ಬಹದ್ದೂರು ಛತ್ರದಲ್ಲಿ ಎರಡು ದಿನಗಳ ಕಾಲ ನಡೆದ `ದೇಸಿ ಬೀಜೋತ್ಸವ’ ಯಶಸ್ವಿಯಾಗಿ ಮುಕ್ತಾಯವಾಯಿತು.
ಬೀಜ ಸಂರಕ್ಷಕರಿಂದ ಅಪರೂಪದ ಪ್ರದರ್ಶನ:
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಬೀಜ ಸಂರಕ್ಷಕರು ಆಸಕ್ತರಿಗೆ ಬೀಜ ಸಂರಕ್ಷಣೆಯ ಮಾಹಿತಿ ನೀಡಿದರು. ಪಿರಿಯಾಪಟ್ಟಣದ `ಬೀಜಮಾತೆ’ ಪದ್ಮಮ್ಮ 150 ಬಗೆಯ ನಾಟಿ ಬೀಜಗಳನ್ನು ಪ್ರದರ್ಶಿಸಿ, ಸಣ್ಣ ಪೇಪರ್ ಪೆÇಟ್ಟಣಗಳಲ್ಲಿ ಕಟ್ಟಿ ಹಂಚಿದರು. ಹಾವೇರಿಯ ನಾಗರಾಜು ಅಪರೂಪದ ಔಷಧೀಯ ಗಿಡಗಳು, ಗೆಡ್ಡೆ-ಗೆಣಸಿನ ಬೀಜಗಳನ್ನು ಮಾರಾಟ ಮಾಡಿದರು. ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕ ಕಂಪನಿ ಬೇಲಿ ಸಸ್ಯಗಳು, ಬಳ್ಳಿ ತರಕಾರಿಗಳನ್ನು ಮಾರಾಟಕ್ಕೆ ಇಟ್ಟಿತ್ತು. ಪಿರಿಯಾಪಟ್ಟಣದ ಕಾಳಪ್ಪ ಸೊಪ್ಪು-ತರಕಾರಿ ಬೀಜಗಳು, ಕುಂದಗೋಳದ ದೇವಧಾನ್ಯ ಕಂಪನಿ 100ಕ್ಕೂ ಹೆಚ್ಚು ಸಿರಿಧಾನ್ಯ, ಅಕ್ಕಡಿ ಕಾಳುಗಳ ತಳಿಗಳನ್ನು ಪ್ರದರ್ಶಿಸಿತು.
ಶಂಕರ ಹಲಸು’, ಜ್ಯೂಸ್ ಬಿಲ್ವ'ಗೆ ಬೇಡಿಕೆ: ಜಿಟಿಜಿಟಿ ಮಳೆಯ ನಡುವೆಯೂ ಬೀಜಾಸಕ್ತರು ಬೀಜ, ಗಿಡಗಳನ್ನು ಖರೀದಿಸಿದರು.ಕೆಂಪು ಹಲಸಿನ ರಾಜ’ ಎನಿಸಿಕೊಂಡ ಶಂಕರ ಹಲಸು' ಹಾಗೂ ಉತ್ತರ ಭಾರತದಲ್ಲಿ ಜನಪ್ರಿಯವಾದಜ್ಯೂಸ್ ಬಿಲ್ವ’ ಗಿಡಗಳಿಗೆ ಭಾರಿ ಬೇಡಿಕೆ ಬಂತು.
ನೈಸರ್ಗಿಕ ಮಾವಿಗೆ ಕೆಜಿಗೆ 150 ರೂ:
ಮಲ್ಲಿಕಾ, ಇಮಾಂ ಪಸಂದ್, ದಶೇರಿ, ಅಮ್ರಪಾಲಿ, ಲಂಗಡ, ಮಲಗೋಬ ಸೇರಿದಂತೆ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳು ಕೆಜಿಗೆ 70 ರೂಪಾಯಿಯಿಂದ 150 ರೂಪಾಯಿವರೆಗೆ ಮಾರಾಟವಾದವು. ಹೊಳೆನರಸೀಪುರದ ಹೊಯ್ಸಳ ಅಪ್ಪಾಜಿ, “ನೈಸರ್ಗಿಕವಾಗಿ ಬೆಳೆದ ನಮ್ಮ ದಶೇರಿ, ಅಮ್ರಪಾಲಿ ಮಾವಿಗೆ ಕಪ್ಪು ಕಲೆಗಳಿವೆ ಎಂದು ಸ್ಥಳೀಯ ವರ್ತಕರು ಅಗ್ಗಕ್ಕೆ ಕೇಳುತ್ತಾರೆ. ಆದರೆ ಬೀಜೋತ್ಸವದಲ್ಲಿ ಗ್ರಾಹಕರು ರುಚಿ ನೋಡಿ ಇಷ್ಟಪಟ್ಟು ಖರೀದಿಸಿದರು. ತಂದಿದ್ದ ಮಾವು ಸಂಪೂರ್ಣ ಮಾರಾಟವಾಯಿತು” ಎಂದು ಸಂತಸ ವ್ಯಕ್ತಪಡಿಸಿದರು.
ಹಲಸಿಗೆ ಉತ್ತಮ ಲಾಭ:
ಹೆಗ್ಗಡದೇವನಕೋಟೆಯ ನೂರಲಕುಪ್ಪೆಯ ನಾಗಮ್ಮ, “ನಮ್ಮ ಊರಲ್ಲಿ ಹಲಸು ಕೊಳ್ಳುವವರೇ ಇರಲಿಲ್ಲ. ಇಲ್ಲಿ ತೊಳೆ ಬಿಡಿಸಿ ಮಾರಿದೆವು. ಉತ್ತಮ ಲಾಭ ಸಿಕ್ಕಿತು” ಎಂದರು.
ಮಕ್ಕಳ ಚಿತ್ರಕಲಾ ಸ್ಪರ್ಧೆ, ಕೈಪಿಡಿ ಬಿಡುಗಡೆ:
ಮೇಳದ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 5-9 ವರ್ಷ ವಿಭಾಗದಲ್ಲಿ ರಿಷಿಕಾ ಎಸ್.ಕೆ. ಪ್ರಥಮ, ಕುಶಾಲ್ ಆರ್. ದ್ವಿತೀಯ, ದೃಶ್ಯ ಎಸ್. ತೃತೀಯ ಬಹುಮಾನ ಪಡೆದರು. 10-12 ವರ್ಷ ವಿಭಾಗದಲ್ಲಿ ವಿಸ್ಮಯ ಪ್ರಥಮ, ಧೀರಜ್ ಕೆ. ದ್ವಿತೀಯ, ಗೋಕುಲ್ ಆರ್ಯನ್ ತೃತೀಯ ಸ್ಥಾನ ಗಳಿಸಿದರು. ಮೂಡಬಿದ್ರೆಯ ಆಳ್ವಾಸ್ ಕೃಷಿ ಕಾಲೇಜಿನ ಡೀನ್ ಡಾ.ಎಸ್.ಎನ್.ವಾಸುದೇವನ್ ಬಹುಮಾನ ವಿತರಿಸಿದರು. `ಕರ್ನಾಟಕ ಬೀಜ ಸಂರಕ್ಷಕರ ಕೈಪಿಡಿ’ಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಲಕ್ಷ್ಮಿ ಬಿಡುಗಡೆ ಮಾಡಿದರು.
ಕಿಸಾನ್ ಮಾಲ್‍ನಲ್ಲಿ ಮಾರಾಟ ಮುಂದುವರಿಕೆ:
ಬೀಜೋತ್ಸವಕ್ಕೆ ಬರಲಾಗದ ಗ್ರಾಹಕರಿಗಾಗಿ ಕುಕ್ಕರಹಳ್ಳಿ ಕೆರೆಯ ತೋಟಗಾರಿಕಾ ನರ್ಸರಿ ಆವರಣದ ಕಿಸಾನ್ ಮಾಲ್‍ನಲ್ಲಿ ದೇಸಿ ಬೀಜಗಳು ಮತ್ತು ಸಾವಯವ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.





























