
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.15:– ಗೋವುಗಳ ಸೇವೆ ಮಾಡುವುದರಿಂದ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ದಿ ಆಗುತ್ತದೆ ಎಂದು ಚಾಮುಲ್‍ನ ಹಿರಿಯ ನಿರ್ದೇಶಕÀ ಹೆಚ್. ಎಸ್. ಬಸವರಾಜು ತಿಳಿಸಿದರು.
ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದದ 2025- 2026 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಪ್ರಮುಖವಾಗಿ ತೊಡಗಿಸಿಕೊಂಡರೆ, ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಹೆಚ್ಚಿನ ಅವಕಾಶಗಳಿವೆ. ಹಸು ಸಾಕುವುದರಿಂದ ಪ್ರತಿ ದಿನ ಹಾಲು ಕರೆದು ಡೇರಿಗೆ ಹಾಕುವ ಮೂಲಕ ವಾರಕ್ಕೊಮ್ಮೆ ಹಣ ಪಡೆದುಕೊಳ್ಳಬಹುದಾಗಿದೆ. ಇತರೇ ವ್ಯವಹಾರಗಳಿಗೆ ಮನೆ ಖರ್ಚಿಗೆ ಹೈನುಗಾರಿಕೆ ಹೆಚ್ಚು ಲಾಭ ಎನ್ನಿಸುತ್ತದೆ ಎಂದರು.
ಗ್ರಾಮಗಳಲ್ಲಿ ಇರುವ ಹಾಲು ಉತ್ಪಾದಕರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಲಾಭಾಂಶವನ್ನು ಪಡೆದುಕೊಳ್ಳುವ ಜೊತೆಗೆ ಒಕ್ಕೂಟ ಮತ್ತು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡಿಸಿ ಕೊಳ್ಳ ಬೇಕು. ನೀವು ಗುಣಮಟ್ಟದ ಹಾಲು ಪೊರೈಕೆ ಮಾಡಿದರೆ ಮಾತ್ರ ಸರ್ಕಾರದ ಸಂರ್ಪೂಣವಾದ ಸಹಾಯಧನವನ್ನು ಪಡೆದು ಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರು ಜಾಗೃತರಾಗಬೇಕು ಎಂದು ಬಸವರಾಜು ತಿಳಿಸಿದರು.
ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಸಂಘದ ಸದಸ್ಯತ್ವವನ್ನು ಹೊಂದಿರುವ ರೈತರು ಮರಣ ಹೊಂದಿದರೆÀ ಒಕ್ಕೂಟದಿಂದ 20 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ರೈತರು ಮುಖ್ಯವಾಗಿ ಪಶು ಆಹಾರ ವನ್ನು ರಾಸುಗಳಿಗೆ ಕ್ರಮ ಬದ್ಧವಾಗಿ ನೀಡಬೇಕು, ಖನಿಜ ಮಿಶ್ರಣ, ಸಂವೃದ್ದಿ ಯಂತಹ ಆಹಾರವನ್ನು ರಾಸುಗಳಿಗೆ ನೀಡಿ ಉತ್ತಮ ಗುಣ ಮಟ್ಟದ ಹಾಲನ್ನು ಪಡೆಯಿರಿ. ರೈತರಿಗೆ ಅನುಕೂಲವಾಗುವಂತೆ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ ಗಳನ್ನು ರೈತರು ಖರೀದಿ ಮಾಡಿದರೆ ಒಕ್ಕೂಟದ ವತಿಯಿಂದ ಸಬ್ಸಿಡಿ ನೀಡಲಾಗುತ್ತದೆ ಎಂದರು.
ಸಹಕಾರ ಸಂಘಕ್ಕೆ ಕಳೆದ ಸಾಲಿನಲ್ಲಿ 1 ಲಕ್ಷ ರೂ.ಗಳಿಗೂ ಹೆಚ್ಚು ಹಾಲು ಉತ್ಪಾದಿಸಿ ಸರಬರಾಜು ಮಾಡಿದ ಸುಮಾರು 79 ಮಂದಿ ರೈತರಿಗೆ ಹಾಲಿನ ಕ್ಯಾನುಗಳು, ಮಿಕ್ಸಿ, ಪ್ಯಾನ್, ಕುಕ್ಕರ್ ಸೇರಿದಂತೆ ದಿನ ಬಳಕೆ ಪದಾರ್ಥಗಳನ್ನು ವಿತರಿಸಲಾಯಿತು. ಮತ್ತು ಬಿಸಲವಾಡಿ ಗ್ರಾಮದಲ್ಲಿ 7 ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವೀರಭದ್ರಸ್ವಾಮಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಮಹದೇವಮ್ಮ ಅವರನ್ನು ಸಂಘದ ವತಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯ ನಿರ್ವಾಹಕ ಬಿಸಲವಾಡಿ ಮಹೇಶ ವಾರ್ಷಿಕ ವರದಿ ಮಂಡಿಸಿ ಸಂಘವು ಈ ಬಾರಿ 6,40,570 ರೂ ಗಳ ನಿವ್ವಳ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ರೈತರಿಗೆ 3 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಶಿವಬಸಪ್ಪ ಮಾತನಾಡಿದರು. ವಿಸ್ತರಣಾಧಿಕಾರಿ ಪಿ ಎಂ ಭಾಗ್ಯರಾಜ್, ಉಪಾಧ್ಯಕ್ಷ ನಾಗರಾಜು ನಿರ್ದೇಶಕರಾದ ಬಿ. ಶಿವಬಸಪ್ಪ, ಬಿ.ಬಿ. ನಾಗರಾಜು, ಸಿ. ರಾಜಶೇಖರ್, ರವಿ, ಮಹೇಶ್, ಮಹದೇವಸ್ವಾಮಿ, ರಾಚಶೆಟ್ಟಿ, ರಾಚನಾಯಕ, ರೂಪಾ, ಮಂಜುಳ ಮುಖಂಡರಾದ ಮಹದೇವಪ್ಪ, ಎಂ ಕುಮಾರ್, ಬಿ ಸಿ ರಾಜು, ಶಿವಮಲ್ಲಪ್ಪ, ಜಿ ಮಹದೇವಪ್ಪ, ಶಿವಣ್ಣ, ಮಹದೇವಸ್ವಾಮಿ, ನೌಕರರಾದ ಮಹದೇವಸ್ವಾಮಿ, ಮಹೇಂದ್ರ, ಗೌತಮ್. ನಾರಾಯಣಸ್ವಾಮಿ ಸೇರಿದಂತೆ ಗ್ರಾಮದ ಹಾಲು ಉತ್ಪಾದಕರ ಸದಸ್ಯರು ಉಪಸ್ಥಿತರಿದ್ದರು.





























