Home ಜಿಲ್ಲೆ ತುಂಗಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ನದಿಗೆ

ತುಂಗಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ನದಿಗೆ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.01: ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ತುಂಗಾ ಜಲಾಶಯದ  22 ಗೇಟ್ ಗಳನ್ನು ತೆರೆದು ನದಿಗೆ ಇಂದು 56 ಸಾವಿರ ಕ್ಯೂಸೆಕ್ಸ್  ನೀರು ಹರಿಬಿಡಲಾಗಿದೆ. ಇದು ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ತಂದಿದೆ.

ಮಲೆನಾಡಿನಲ್ಲಿ ಮಳೆ ಬಿರುಸುಗೊಂಡಿದೆ. ಹೀಗಾಗಿ ಗಾಜನೂರಿನ ತುಂಗಾ, ಲಕ್ಕವಳ್ಳಿಯ ಭದ್ರಾ ಹಾಗೂ ಕಾರ್ಗಲ್ನ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ

ಕಳೆದ 24 ಗಂಟೆಗಳಲ್ಲಿ 28.6 ಸೆಂ.ಮೀ ದಾಖಲೆಯ ಮಳೆಯಾಗಿದ್ದು.  ವಾರಾಹಿ ಜಲಾನಯನ ಪ್ರದೇಶದ ವ್ಯಾಪ್ತಿಯ ಹೊಸನಗರ ತಾಲ್ಲೂಕಿನ ಚಕ್ರಾ ನಗರದಲ್ಲಿ 21 ಸೆಂ.ಮೀ ಮಳೆ ದಾಖಲಾಗಿದೆ. ಸಾವೇಹಕ್ಲಿನಲ್ಲಿ 19.4, ಮಾಣಿಯಲ್ಲಿ 17.1 ಹಾಗೂ ಮಾಸ್ತಿಕಟ್ಟೆಯಲ್ಲಿ 16 ಸೆಂ.ಮೀ ಮಳೆಯಾಗಿದೆ.

 ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಭಾಗದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಭದ್ರಾ ಜಲಾಶಯಕ್ಕೂ ನೀರಿನ ಹರಿವು ಹೆಚ್ಚಳ:

ಭದ್ರಾ ಜಲಾಶಯಕ್ಕೆ ಒಳಹರಿವು 12,983 ಕ್ಯುಸೆಕ್ ಇದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದಲ್ಲಿ 1.3 ಅಡಿ ನೀರು ಏರಿಕೆಯಾಗಿದೆ. 186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 157.3 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 180.3 ಅಡಿ ನೀರು ಸಂಗ್ರಹಗೊಂಡಿತ್ತು.

ಹೀಗಾಗಿ ಈ ವರೆಗೆ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಬೇಕಿದ್ದ ರೈತರಿಗೆ ಇನ್ನು ಕೆಲ ದಿನದಲ್ಲಿ ತುಂಗಭದ್ರ ಜಲಾಶಯಕ್ಕೆ ನೀರು ಬಂದು ಕಾಲುವೆಗಳಿಗೆ ನೀರು ಹರಿಸಿದರೆ ಬಿತ್ತನೆ, ಸಸಿ ನಾಟಿಮಾಡುವ ಕಾರ್ಯ ಚುರುಕುಗೊಳ್ಳಲಿದೆ.

ಸಧ್ಯ ಜಲಾಶಯದಲ್ಲಿ 39 ಟಿಎಂಸಿ ನೀರಿದ್ದು. 25 ಸಾವಿರ ಕ್ಯೂಸೆಕ್ಸ್ ನೀರಿನ ಒಳ ಹರಿವು ಇದೆ.