Home ಜಿಲ್ಲೆ ತಾಲೂಕು ಪಂಚಾಯಿತಿಯಿಂದ ಗುಳೆ ಹೋಗದಂತೆ ತಡೆಗೆ “ವಲಸೆ ಯಾಕೆ? ನಿಮ್ಮೂರಲ್ಲೆ ಕೆಲಸ” : ವಿಶೇಷ ಅಭಿಯಾನ

ತಾಲೂಕು ಪಂಚಾಯಿತಿಯಿಂದ ಗುಳೆ ಹೋಗದಂತೆ ತಡೆಗೆ “ವಲಸೆ ಯಾಕೆ? ನಿಮ್ಮೂರಲ್ಲೆ ಕೆಲಸ” : ವಿಶೇಷ ಅಭಿಯಾನ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.25 ಗ್ರಾಮೀಣ ಪ್ರದೇಶಗಳ ಕೃಷಿ ಕೂಲಿ ಕಾರ್ಮಿಕರು ಕೆಲಸ ಹರಸಿ, ಬೇರೆ ಸ್ಥಳಗಳಿಗೆ ಗುಳೆ ತಡೆಯುವ ನಿಟ್ಟಿನಲ್ಲಿ ಹೊಸಪೇಟೆ ತಾಲೂಕು ಪಂಚಾಯಿತಿಯಿಂದ “ವಲಸೆ ಯಾಕೆ? ನಿಮ್ಮೂರಲ್ಲೆ ಕೆಲಸ” ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.

ತಾಲೂಕಿನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ತಾಂಡಾಗಳ ಕೃಷಿ ಕೂಲಿ ಕಾರ್ಮಿಕರು ಕೆಲಸ ಹರಸಿ ಬೇರೆ ಪ್ರದೇಶಗಳಿಗೆ ಗುಳೆ ಹೋಗದಂತೆ ತಡೆಯಲು ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ಜು. 1 ರಿಂದಲೇ ಮನೆ ಮನೆ ಭೇಟಿ ನೀಡಿ, ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ತಾಲೂಕಿನ ಕಲ್ಲಹಳ್ಳಿ ತಾಂಡ, ಸೀತಾರಾಮತಾಂಡದಲ್ಲಿ ಜರುಗಿದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸೈಯದ್ ಮನ್ಸೂರು,   ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ ಸೂಚನೆಯಂತೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಮ್ಡಿ ಆಲಂಬಾಷಾ, ಹಾಗೂ ವಿಬಿ ಜಿ ರಾಮ್ ಜೀ ಸಹಾಯಕ ನಿರ್ದೇಶಕರಾದ ಕವಿತ ಕರ್ಣಂ ಸಲಹೆಯಂತೆ  ಹೊಸಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ‘ವಲಸೆ ಯಾಕೆ? ನಿಮ್ಮೂರಲ್ಲೇ ಕೆಲಸ” ಅಭಿಯಾನವನ್ನು ಕೈಗೊಳ್ಳಲಾಗಿದೆ.

ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಲಿ ಮೊತ್ತವನ್ನು 370 ರೂ. ಗಳಿಂದ 382 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಮಾನವ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಹಿನ್ನಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಕೆಲಸ ಹರಸಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಈ ಹಿನ್ನಲೆಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮದಲ್ಲಿಯೇ ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.

ವಿಶೇಷ ಜಾಗೃತಿ ಕಲ್ಲಹಳ್ಳಿ ತಾಂಡ ಹಾಗೂ ಸೀತಾರಾಮ ತಾಂಡಾ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗಳಿಗೆ ಭೇಟಿ ನೀಡುವ ಜೊತೆಗೆ ಅಂಗಡಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿದರು.

ವಿಶೇಷ ಜನಜಾಗೃತಿ ಅಭಿಯಾನದಲ್ಲಿ ಐಇಸಿ ಸಂಯೋಜಕರಾದ ಹೆಚ್. ನಾಗರಾಜ, ತಾಂತ್ರಿಕ ಸಹಾಯರಾದ ಮಮತ ನಾಯ್ಕ, ಕಾರ್ಯದರ್ಶಿ ಕೆ.ಎಂ. ನಾಗರಾಜ ಸ್ವಾಮಿ, ಕರವಸೂಲಿಗಾರ ಚಂದ್ರನಾಯ್ಕ, ಟಿ.ಆರ್.ಎಂ. ಹರೀಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರರು, ತಾಂಡ ರೋಜ್ಗಾರ್ ಮಿತ್ರರು ಭಾಗವಹಿಸಿದ್ದರು.

ಹೊಸಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೃಷಿ ಕೂಲಿ ಕಾರ್ಮಿಕರು ಕೆಲಸ ಹರಸಿ ಬೇರೆ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ವತಿಯಿಂತ “ವಲಸೆ ಯಾಕೆ, ನಿಮ್ಮೂರಲ್ಲೆ ಕೆಲಸ” ಎಂಬ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಮೂಲಕ ವಿಬಿ ಜಿ ರಾಮ್ ಜೀ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಎಂ.ಡಿ.ಆಲಂ ಭಾಷ

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ,

ಹೊಸಪೇಟೆ, ವಿಜಯನಗರ.