Home ಜಿಲ್ಲೆ ಮೈಸೂರು ಡೇರಿ ಅಧ್ಯಕ್ಷರು ಆಡಳಿತ ನಿರ್ವಹಣೆಯಲ್ಲಿ ಹಿಡಿತ ಹೊಂದಿರಬೇಕು

ಡೇರಿ ಅಧ್ಯಕ್ಷರು ಆಡಳಿತ ನಿರ್ವಹಣೆಯಲ್ಲಿ ಹಿಡಿತ ಹೊಂದಿರಬೇಕು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.10-
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿರುವ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯ ನಿರ್ದೇಶಕರ ಸಹಕಾರಿ ಕಾಯ್ದೆಗಳ ಬಗ್ಗೆ ಅರಿವು ಪಡೆದುಕೊಂಡು ಉತ್ತಮವಾಗಿ ಆಡಳಿತ ನಿರ್ವಹಣೆ ಮಾಡಿದರೆ ಅಭಿವೃದ್ದಿ ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.


ನಗರದ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಸಹಕಾರ ಮಹಾ ಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ತಾಲೂಕು ಡೇರಿ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕುಟ ರಚನೆಯಾದ ಬಳಿಕ ಜಿಲ್ಲೆಯಿಂದಲೇ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದೆ. ಜೊತೆಗೆ ಸಹಕಾರ ಸಂಘಗಳ ಸಂಖ್ಯೆಯು ಸಹ ಹೆಚ್ಚಳವಾಗಿದೆ. ಸಂಘದ ಆಡಳಿತ ಮಂಡಲಿ ಉತ್ತಮವಾಗಿ ನಿರ್ವಹಣೆಯಾದರೆ, ಹಾಗೂ ನೌಕರರೊಂದಿಗ ಉತ್ತಮ ಭಾಂದವ್ಯವನ್ನು ಹೊಂದಿ ಸರಿಯಾದ ರೀತಿಯಲ್ಲಿ ಹಾಲು ಶೇಖರಣೆ ಮತ್ತು ಮಾರಾಟ ಮಾಡಿದರೆ, ಮಾದರಿ ಸಹಕಾರ ಸಂಘ ಮಾಡಲು ಹೆಚ್ಚಿನ ಅವಕಾಶ ಇದೆ ಎಂದರು.


ಡೇರಿ ಅಧ್ಯಕ್ಷರು ಮಾಸಿಕವಾಗಿ ಆಡಳಿತ ಮಂಡಲಿಯ ಸಭೆಯನ್ನು ನಡೆಸಿ, ಸಂಘದ ಬೆಳವಣಿಗೆಗಳು ಹಾಗು ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿ, ನಿರ್ದೇಶಕರ ಸಲಹೆ, ಸಹಕಾರವನ್ನು ಪಡೆದುಕೊಳ್ಳಬೇಕು. ಡೇರಿಗೆ ವಾರದಲ್ಲಿ ಮೂರು ದಿನÀವಾದರು ಭೇಟಿ ನೀಡಬೇಕು. ನಿರ್ದೇಶಕರು ಸಹ ಗುಣಮಟ್ಟದ ಹಾಲು ಖರೀದಿಯಾಗುತ್ತಿರುವ ಬಗ್ಗೆ ಭೇಟಿ ನೀಡಿ ಖಾತರಿ ಪಡಿಸಿಕೊಳ್ಲಬೇಕು. ಹಾಲು ಉತ್ಪಾದಕರ ಸಣ್ಣಪುಟ್ಟ ಸಮಸ್ಯೆಗಳನ್ನು ಡೇರಿ ಹಂತದಲ್ಲಿಯೇ ಬಗೆಹರಿಸಿ, ಸೌಹಾರ್ಧ ವಾತಾವರಣ ನಿರ್ಮಾಣವಾಗುವಂತೆ ನೋಡಬೇಕು ಕಿವಿ ಮಾತು ಹೇಳಿದರು.


ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಚಾಮುಲ್ ಪ್ರಗತಿಯಲ್ಲಿ ಡೇರಿ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರ ಶ್ರಮ ಇದೆ. ಡೇರಿ ಅಧ್ಯಕ್ಷರು ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ಕಾಯ್ದೆ, ಬೈಲಾ ಬಗ್ಗೆ ತಿಳಿದು ಕೊಳ್ಳಬೇಕು. ಸಹಕಾರ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಸಂಘದ ಸದಸ್ಯರು ಪ್ರಗತಿಯ ಹೊಂದಿ ಮಾದರಿ ಸಂಘವವನ್ನಾಗಿಸಲು ಎಲ್ಲರು ಶ್ರಮಿಸೋಣ ಎಂದರು.


ಚಾಮುಲ್ ನಿರ್ದೇಶಕರಾದ ಎಚ್.ಎಸ್. ಬಸವರಾಜು, ಸದಾಶಿವಮೂರ್ತಿ ಡೇರಿ ನಿರ್ವಹಣೆ ಮತ್ತು ರಾಸುಗಳ ವಿಮೆ, ಸಂರಕ್ಷಣೆ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆಎಂಎಫ್ ನಿವೃತ್ತ ಅಧಿಕಾರಿ ದೇವರಾಜು, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಮಹೇಶ್ ವಿಚಾರ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾವಣೆ ಅಧಿಕಾರಿ ಮನುಜ, ವ್ಯವಸ್ಥಾಪಕ ಮಲ್ಲಿಕಾರ್ಜುನಸ್ವಾಮಿ, ಚಾಮುಲ್ ವಿಸ್ತರಣಾಧಿಕಾರಿ ಭಾಗ್ಯರಾಜ್, ನಾಗೇಶ್, ಒಕ್ಕೂಟದ ಮಲ್ಲೇಶ್, ಕೆಂಡಗಣ್ಣ, ಡೇರಿ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.