Home ಜಿಲ್ಲೆ ಮಂಗಳೂರು ಜಿಲ್ಲಾ ಕೌಶಲ್ಯಾಭಿವೃದ್ಧಿ ಮಿಷನ್ ಸಭೆ

ಜಿಲ್ಲಾ ಕೌಶಲ್ಯಾಭಿವೃದ್ಧಿ ಮಿಷನ್ ಸಭೆ

ಮಂಗಳೂರು- ಜಿಲ್ಲಾ ಕೌಶಲ್ಯ ಅಭಿವೃದ್ಧಿ ಮಿಷನ್ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ತಯಾರಿಸಲು ಸರ್ಕಾರದ ನಿರ್ದೇಶನದಂತೆ ನೋಡಲ್ ಅಧಿಕಾರಿ ಹರೀಶ್ ಸಿ.ಪಿ. ಅವರು ವರದಿಯನ್ನು ಪ್ರಾತ್ಯಕ್ಷಿಕೆ ಮೂಲಕ ಸಭೆಯಲ್ಲಿ ಮಂಡಿಸಿದರು. ಜಿಲ್ಲೆಯ ಪ್ರೌಢಶಾಲೆಗಳು, ಪದವಿಪೂರ್ವ, ಪದವಿ ಕಾಲೇಜುಗಳು, ಐಟಿಐ ಕಾಲೇಜು, ಡಿಪೊ?ಲೀಮಾ ಮತ್ತು ಇಂಜಿನಿಯರಿಂಗ್ ಕಾಲೇಜುಗಳು, ಜಿಲ್ಲೆಯ ಕೈಗಾರಿಕೆಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳಿಂದ ಮಾಹಿತಿಯನ್ನು ಕ್ರೋಡಿಕರಿಸಿ ಸದರಿ ವರದಿಯನ್ನು ಸಿದ್ಧಪಡಿಸಲಾಗಿದ್ದು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಪೂರೈಕೆ ಮತ್ತು ಬೇಡಿಕೆ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.
ಜಿಲ್ಲೆಯ ಕೈಗಾರಿಕೆಗಳಿಗೆ ಅವಶ್ಯವಿರುವ ನೂತನ ಕೌಶಲ್ಯಗಳ ಬೇಡಿಕೆಗೆ ಮತ್ತು ಪೂರೈಕೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ತರಬೇತಿಗಳ ಗುಣಮಟ್ಟದ ಬಗ್ಗೆ ಚರ್ಚಿಸಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದ ಪೂರೈಕೆ-ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಸಭೆಯಲ್ಲಿ ಮಂಡಿಸಿದರು. ಜೊತೆಗೆ ಉದ್ಯೋಗಾರ್ಥಿಗಳಿಗೆ ಬೈಕಂಪಾಡಿಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯಲು ಜಿಲ್ಲೆಯ ಎಲ್ಲಾ ಕಡೆಗಳಿಂದ ಶಿಕ್ಷಣಾರ್ಥಿಗಳು ಆಗಮಿಸುತ್ತಿದ್ದರೂ ದಿನಂಪ್ರತಿ ಹೋಗಿ ಬರಲು ಸಾಧ್ಯವಾಗದೇ ಇರುವವರಿಗೆ ವಸತಿ ಸೌಕರ್ಯ ಒದಗಿಸುವುದು, ವಿದ್ಯುತ್ ಚಾಲಿತ ವಾಹನಗಳು, ಹೋಟೆಲ್ ಮ್ಯಾನೇಜ್ಮೆಂಟ್ ಮೊದಲಾದ ತರಬೇತಿಗಳನ್ನು ತರಬೇತಿ ಶೀರ್ಷಿಕೆಯಡಿ ಸೇರಿಸಲಾಗಿದ್ದು, ಮಹಿಳಾ ಕೌಶಲ್ಯಾಭಿವೃದ್ಧಿಯಡಿ ಲಭ್ಯ ಕೌಶಲ್ಯಗಳನ್ನು ಸೇರಿಸಲು ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಹಲವಾರು ಖಾಸಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಅವುಗಳನ್ನು ಮ್ಯಾಪ್ ಮಾಡಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಹೊರ ಜಿಲ್ಲೆಗಳ ವಲಸೆ ಕಾರ್ಮಿಕರು ಜಾಸ್ತಿಯಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸ್ಥಾನಮಾನ ನೀಡಿ ಗುರುತಿಸುವ ಅವಶ್ಯಕತೆಯಿರುತ್ತದೆ. ಅಂಕಿ ಅಂಶಗಳ ಸಂಗ್ರಹಣೆ ಮತ್ತು ಮೇಲ್ವಿಚಾರಣೆ ಸವಾಲಿನ ಕೆಲಸವಾಗಿದ್ದು, ಈ ದೃಷ್ಠಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಅಂಕಿ-ಅಂಶಗಳನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಲಾಗಿದೆ ಎಂದು ನೋಡಲ್ ಅಧಿಕಾರಿ ಹರೀಶ್ ಸಿ.ಪಿ. ಅವರು ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು (ಆSಆP) ಅಂತಿಮಗೊಳಿಸಲಾಯಿತು. ಜಿಲ್ಲಾಧಿಕಾರಿಗಳು ಕೌಶಲ್ಯ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನಗಳ ಬಗ್ಗೆ ಪರಿಶೀಲಿಸಿ ಪ್ರಗತಿ ಸಾಧಿಸಲು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು.ಕೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಕೆನರಾ ಛೇಂಬರ್ ಆಫ್ ಕಾಮರ್ಸ್ & ಇಂಡಷ್ಟ್ರಿ ಅಧ್ಯಕ್ಷ ಅಬ್ದುಲ್ ಮುದಸರ್, ಕೆನರಾ ಇಂಡಸ್ಟ್ರೀಸ್ ಎಸೋಸಿಯೇಶನ್ ಅಧ್ಯಕ್ಷ
ಎಂ.ಡಿ.ಪೂಜಾರಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷೆ ಕುಸುಮ, ಕೆಡಿಇಎಮ್ ಪ್ರತಿನಿಧಿ ವೈಶಾಕ್ ಪೈ, ಜಿಲ್ಲಾ ಕಾರ್ಮಿಕ ಅಧಿಕಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.