ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯುನಿಕಾರ್ನ್ ಚಿಕಿತ್ಸೆಯನ್ನು 73 ವರ್ಷದ ಕಮಲಮ್ಮ ಮರೀಗೌಡರಿಗೆ ಡಾ. ಹರ್ಷಬಸಪ್ಪ ಹಾಗೂ ಡಾ. ಶ್ರೀನಿಧಿ ಹೆಗ್ಗಡೆ ನೇತೃತ್ವದ ತಂಡ ಯಶಸ್ವಿಯಾಗಿ ನಡೆಸಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್ ಮಾಹಿತಿ ನೀಡಿದರು.
ಪಿರಿಯಾಪಟ್ಟಣ ತಾಲ್ಲೂಕು ಗೊರಳ್ಳಿಯ 73 ವರ್ಷದ ಕಮಲಮ್ಮ ಮರೀಗೌಡರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದಿದ್ದರಿಂದ ಅತ್ಯಂತ ಅಪರೂಪದ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಟಾವಿ ಚಿಕಿತ್ಸೆಯ ಸಮಯದಲ್ಲಿ ಹೃದಯದ ರಕ್ತನಾಳಗಳಿಗೆ ಉಂಟಾಗಬಹುದಾದ ಮಾರಣಾಂತಿಕ ಅಡಚಣೆಯನ್ನು ತಡೆಯಲು ಯುನಿಕಾರ್ನ್ ಚಿಕಿತ್ಸೆಯನ್ನು ವಿಧಾನವನ್ನು ಅನುಸರಿಸಲಾಗುತ್ತದೆ. ಈ ವಿಧಾನವನ್ನು ಕರ್ನಾಟಕದಲ್ಲಿಯೇ 4ನೇ ಚಿಕಿತ್ಸೆ ಹಾಗೂ ಜಯದೇವದಲ್ಲಿಯೇ ಪ್ರಥಮವಾಗಿ ಚಿಕಿತ್ಸೆ ನೀಡಿ ಸಾಧನೆ ಮಾಡಿದ ಕೇಂದ್ರವಾಗಿದೆ. ಆದ್ದರಿಂದ ವೈದ್ಯರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಡಾ. ಹರ್ಷಾಬಸಪ್ಪ ಮಾತನಾಡಿ ಮಳವಳ್ಳಿ ತಾಲ್ಲೂಕಿನ ಅಣಸಾಲೆ ಗ್ರಾಮದ 73 ವರ್ಷದ ಎಸ್. ಸಿದ್ದರಾಜುರವರಿಗೆ ಮಹಾಪಧಮನಿಯ ಕವಾಟವು ಅತ್ಯಂತ ಗಟ್ಟಿಯಾಗಿ ಕ್ಯಾಲ್ಸಿಯಂ ಸಂಗ್ರಹವಾಗಿದ್ದರಿಂದ ಕೃತಕ ಕವಾಟ ಅಳವಡಿಸಿದ ನಂತರ ಅಪರೂಪದ ಪ್ರೋಜನ್ ಲೀಫ್‍ಲೆಟ್ ಎಂಬ ತೊಂದರೆ ಉಂಟಾಗಿ ವೈದ್ಯರು ತಕ್ಷಣ ಕ್ಯಾಥೇಟರ್ ಮ್ಯಾನಿಪ್ಯುಲೇಷನ್ ಮೂಲಕ ಶಸ್ತ್ರಚಿಕಿತ್ಸೆ ನಡೆಸದೆ ಯಶಸ್ವಿಯಾಗಿ ಸಮಸ್ಯೆ ಪರಿಹರಿಸಿದರು ಎಂದ ಅವರು ಒಂದೇ ದಿನದಲ್ಲಿ ಎರಡು ಅತ್ಯಂತ ಸಂಕೀರ್ಣ ಟಾವಿ ಚಿಕಿತ್ಸೆಯನ್ನು ಯಶಸ್ವಿ ಮಾಡಲಾಗಿದೆ. ಇದರಿಂದ ಮೈಸೂರಿನಲ್ಲಿಯೇ ವಿಶ್ವಮಟ್ಟದ ಸ್ಟ್ರಕ್ಚರಲ್ ಹೃದಯ ಚಿಕಿತ್ಸೆಯನ್ನು ನೀಡುವ ಸಾಮಥ್ರ್ಯ ನಮ್ಮ ಜಯದೇವ ಆಸ್ಪತ್ರೆಗೆ ಇದೆ ಎಂದ ಅವರು ನಿರ್ದೇಶಕರಾದ ಡಾ. ದಿನೇಶ್ ಬಿ. ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಕೆ.ಎಸ್. ಸದಾನಂದ್ ಹಾಗೂ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಶ್ರೀನಿಧಿ ಹೆಗ್ಗಡೆ, ಡಾ. ಶಶಿಕಾಂತ್, ಡಾ. ಪಂಕಜ್ ಬಿ., ಶಾಂತಕುಮಾರಿ, ಸತೀಶ್, ಭುವನ್ ಹಾಜರಿದ್ದರು.


































