
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,27- ದೇಶದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಹಕ್ಕು ಹಾಗೂ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಕುರಿತು ಇತ್ತೀಚಿನ ದಿನಗಳಲ್ಲಿ ಹಲವು ಪ್ರಶ್ನೆಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸೇರಿದಂತೆ ಮತದಾರರ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ, ಪುನಃ ಸೇರ್ಪಡೆ ಹಾಗೂ ಮತದಾರರ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಒಳಗಡೆಯೇ ಆಕ್ಷೇಪಣೆಗಳು ದಾಖಲಾಗಿವೆ ಎಂಬ ವರದಿಗಳು ಹೊರಬಂದಿವೆ. ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ಸತ್ಯಾಂಶವನ್ನು ಜನರ ಮುಂದೆ ಇಡಬೇಕಾಗಿದೆಂದು ಎಂದು ಅಖಿಲ ಕರ್ನಾಟಕ ಜಮಾತ್ ಏ ಮನ್ಸುರಿ ಜಿಲ್ಲಾ ಅಧ್ಯಕ್ಷ ಬಿ. ಎಮ್. ರಫಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು“ಚುನಾವಣೆ ಎಂದರೆ ಕೇವಲ ಮತದಾನ ಪ್ರಕ್ರಿಯೆಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಿನ ಅಭಿವ್ಯಕ್ತಿ. ಮತದಾರರ ಪಟ್ಟಿಯಲ್ಲಿನ ಯಾವುದೇ ತಪ್ಪು ಅಥವಾ ಅನ್ಯಾಯವು ಅರ್ಹ ನಾಗರಿಕರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಇಂತಹ ವಿಷಯಗಳಲ್ಲಿ ಯಾವುದೇ ಅನುಮಾನಕ್ಕೂ ಅವಕಾಶ ಇರಬಾರದು” ಎಂದು ಹೇಳಿದ್ದಾರೆ.
“ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸಲ್ಪಡಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ, ಅನ್ಯಾಯ ಅಥವಾ ಅಕ್ರಮಕ್ಕೆ ಅವಕಾಶ ಇರಬಾರದು. ಆರೋಪಗಳು ಸತ್ಯವೆಂದು ತನಿಖೆಯಲ್ಲಿ ದೃಢಪಟ್ಟರೆ, ಜ್ಞಾನೇಶ್ ಕುಮಾರ್ ಸೇರಿದಂತೆ ಸಂಬಂಧಪಟ್ಟ ಯಾವುದೇ ವ್ಯಕ್ತಿಯ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿಲ್ಲವೆಂದು ತನಿಖೆಯಲ್ಲಿ ಸ್ಪಷ್ಟವಾದರೆ ಅದನ್ನೂ ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದೇ ಪ್ರಜಾಪ್ರಭುತ್ವದ ಪಾರದರ್ಶಕತೆ ಎಂದಿದ್ದಾರೆ.























