Home ಜಿಲ್ಲೆ ಮೈಸೂರು ಕೌಶಲ್ಯಕ್ಕೆ ತಕ್ಕಂತೆ ಪೇಟೆಗಳನ್ನ ನಿರ್ಮಿಸಿದವರು ಕೆಂಪೇಗೌಡರು: ನಿರ್ಮಾಲಾನಂದಶ್ರೀ

ಕೌಶಲ್ಯಕ್ಕೆ ತಕ್ಕಂತೆ ಪೇಟೆಗಳನ್ನ ನಿರ್ಮಿಸಿದವರು ಕೆಂಪೇಗೌಡರು: ನಿರ್ಮಾಲಾನಂದಶ್ರೀ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.02:
ಸರ್ವಧರ್ಮ ಸಮನ್ವಾಯಾಚಾರ್ಯ ನಮ್ಮ ನಾಡಪ್ರಭು ಕೆಂಪೇಗೌಡರು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀಗಳು ಅಭಿ ಪ್ರಾಯಪಟ್ಟರು.


ಅವರು ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಒಕ್ಕಲಿಗರ ವೇದಿಕೆಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಒಂದು ದೇಶದ ನಿಜವಾದ ಸಂಪತ್ತು ಅಲ್ಲಿನ ಜನ ಸಮುದಾಯ. ಜನರ ಕೌಶ್ಯಲ್ಯವನ್ನು ವೃದ್ದಿಸಿ ಅದನ್ನು ಸದ್ಬಳಕೆ ಮಾಡಿಕೊಂಡು ದೇಶ ಕಟ್ಟುವವನು ನಿಜವಾದ ಜನನಾಯಕ. 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿ ತಮ್ಮ ರಾಜ್ಯದ ಜನರ ಕೌಶಲ್ಯಕ್ಕೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿ ಅವರ ಆರ್ಥಿಕ ಸುಸ್ಥಿರತೆಗೆ ಶ್ರಮಿಸಿದರು. ಕೆಂಪೇಗೌಡರು ಜಾತಿಗಾಗಿ ಪೇಟೆಗಳನ್ನು ಕಟ್ಟಲಿಲ್ಲ, ಬದಲಾಗಿ ಜನರ ಆರ್ಥಿಕ ಅಭಿವೃದ್ದಿಗಾಗಿ ಪೇಟೆಗಳನ್ನು ಕಟ್ಟಿದರು. ಕೆಂಪೇಗೌಡರ ಜಯಂತಿ ಕೇವಲ ಕುಣಿತಕ್ಕೆ ಸೀಮಿತವಾಗಬಾರದು. ಬದಲಾಗಿ ಅವರ ಚಿಂತನೆಗಳನ್ನು ನಮ್ಮ ಆಡಳಿತಗಾರರು ಮತ್ತು ಜನಸಾಮಾನ್ಯರು ಅಳವಡಿಸಿಕೊಳ್ಳಬೇಕು. ಕೆಂಪೇಗೌಡರ ಆದರ್ಶಗಳನ್ನು ಜನಸಮೂಹಕ್ಕೆ ಭಿತ್ತುವ ಕೆಲಸವಾಗಬೇಕೆಂದು ಚುಂಚಶ್ರೀಗಳು ಕರೆ ನೀಡಿದರು.


ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗಳು ಮಾತನಾಡಿ ಯಾವುದೇ ವ್ಯಕ್ತಿ ಯಾವುದೋ ಒಂದು ಜಾತಿ, ಧರ್ಮದಲ್ಲಿ ಜನಿಸುತ್ತಾನೆ. ಆದರೆ ಆತ ತನ್ನ ನಡವಳಿಕೆಗಳಿಂದ ನಾಡಿಗೆ ಆದರ್ಶವಾಗುತ್ತಾನೆ. ಕೆಂಪೇಗೌಡರು ಒಕ್ಕಲಿಗ ಸಮುದಾಯದಲ್ಲಿ ಜನಿಸಿದರೂ 500 ವರ್ಷಗಳ ಹಿಂದೆಯೇ ಸಮ ಸಮಾಜ ನಿರ್ಮಾಣಕ್ಕೆ ಮುಂದಾದವರು. ವಿಜಯನಗರದ ಅರಸರ ಸಾಮಂತರಾಗಿದ್ದರೂ ಸ್ವತಂತ್ರ ಮನಸ್ಥಿಯನ್ನು ಹೊಂದಿದ್ದವರು. ಕೆಂಪೇಗೌಡ ತತ್ವಜ್ಞಾನಿ ಆಡಳಿತಗಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಜನಿಸುವ ವ್ಯಕ್ತಿ ಯಾವುದಾರೊಂದು ಜಾತಿಯಲ್ಲಿ ಹುಟ್ಟಲೇಬೇಕು. ಹುಟ್ಟಿದ ಅನಂತರ ನಾವು ಜಾತ್ಯಾತೀತರಾಗಿರಬೇಕು. ಸರ್ವ ಜಾತಿ ಜನಾಂಗಳ ಅಭಿವೃದ್ದಿಗೆ ಅಗತ್ಯವಾದ ಪೇಟೆಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಿಸುವ ಮೂಲಕ ನಾಡಪ್ರಭು ಕೆಂಪೇಗೌಡರು ರಾಜಕೀಯ ಆದರ್ಶಗಳನ್ನು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ ಅವರ ಕಾರ್ಯದಕ್ಷತೆ ಮತ್ತು ವಿಸಾಲ ಮನೋಭಾವ ನಮ್ಮೆಲ್ಲರಿಗೂ ಮಾದರಿ ಎಂದರು.
ಮಾಜಿ ಸಚಿವ ಡಾ.ಆಶ್ಥಥನಾರಾಯಣ ಮಾತನಾಡಿ ಪಕ್ಷ ಯಾವುದೇ ಇರಲಿ. ಅವರಿಗೆ ಒಳ್ಳೆಯದನ್ನು ಮಾಡಬೇಕು.


ಕೆ.ಆರ್.ಪೇಟೆ ಜನರೊಂದಿಗಿನ ನನ್ನ ಸಂಬಂಧ ಮರೆಯಲಾರದ್ದು. ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜು ವಿಧಾನ ಸಭೆಯಲ್ಲಿ ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿ ಗಮನ ಸೆಳೆಯುತ್ತಿರುವುದು ಮೆಚ್ಚುವ ವಿಚಾರ. ಕೆ.ಆರ್.ಪೇಟೆ ಸೇರಿದಂತೆ ಸಮಗ್ರ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಅಗತ್ಯವಾದ ನೀಲನಕ್ಷೆಯನ್ನು ತಯಾರಿಸಬೇಕು. ಅಭಿವೃದ್ದಿಯ ದೃಷ್ಠಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡುವಂತೆ ಅಶ್ವಥ್ ನಾರಾಯಣ ಕರೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರವಾಸಿ ಮಂದಿರದ ಆವರಣದಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿ ತೆರಳಿದರು.


ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ವಿಜಯ ರಾಮೇಗೌಡ, ಅರಿಶಿನಕುಂಟೆ ರಾಮಕೃಷ್ಣೇಗೌಡ, ಚಿತ್ರನಟ ಕೆ.ಆರ್.ಪೇಟೆ ಶಿವರಾಜ್, ಬಿಗ್ ಬಾಸ್ ಸ್ಪರ್ಧಿ ಕಾವ್ಯ ಶೈವ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ನೆಲ್ಲಿಗೆರೆ ಬಾಲು, ಅಶೋಕ್ ಜಯರಾಂ ವೇದಿಕೆಯಲ್ಲಿದ್ದು ಮಾತನಾಡಿದರು.


ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮನಾಥ ಸ್ವಾಮೀಜಿ, ಶ್ರೀ ಕೀರ್ತಿನಾಥ ಸ್ವಾಮೀಜಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಲಿಯ ನಿರ್ದೇಶಕ ಎಸ್.ಎಲ್.ಮೋಹನ್, ಉದ್ಯಮಿ ಪುರ ವಿಶ್ವನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಟಿ.ಬಲದೇವ್, ರಾಜ್ಯ ಕೈಗಾರಿಕಾ ಮಾರಾಟ ಮತ್ತು ಸರಬರಾಜು ಸಂಘದ ಅಧ್ಯಕ್ಷ ಬಸ್ ಸಂತೋಷ್ ಕುಮಾರ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ತಾಲೂಕು ಕ.ಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಹಿರಿಯ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ,, ತಾಲೂಕು ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಕುಮಾರಗೌಡ, ಗೌರವಾಧ್ಯಕ್ಷ ಟಿ.ವೈ.ಆನಂದ್, ಕಾರ್ಯದರ್ಶಿ ಗೌರೀಶ್, ಸೇರಿದಂತೆ ಹಲವರಿದ್ದರು.