Home ಜಿಲ್ಲೆ ಮೈಸೂರು ಕೆರೆ ಕಟ್ಟೆಗಳಿಗೆ ನೀರು ಹರಿಸದಿದ್ದರೆ ಮಂಗಳವಾರದಿಂದ ಪ್ರತಿಭಟನೆ

ಕೆರೆ ಕಟ್ಟೆಗಳಿಗೆ ನೀರು ಹರಿಸದಿದ್ದರೆ ಮಂಗಳವಾರದಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.08:
ತಾಲೂಕಿನ ಕೆರೆ ಕಟ್ಟೆಗಳಿಗೆ ತಕ್ಷಣವೇ ಹೇಮೆಯ ನೀರು ಹರಿಸದಿದ್ದರೆ ಆಗಸ್ಟ್ 11 ಮಂಗಳವಾರದಿಂದ ನೀರಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ತಾಲೂಕು ರೈತಸಂಘ ಎಚ್ಚರಿಸಿದೆ.


ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿಂದು ಪಟ್ಟಣದ ಹೇಮಾವತಿ ಕಛೇರಿಗೆ ಆಗಮಿಸಿದ ರೈತ ಮುಖಂಡರು ನೀರಿಗಾಗಿ ಆಗ್ರಹಿಸಿ ಚಳುವಳಿ ಸಂಘಟಿಸುವ ಎಚ್ಚರಿಕೆ ನೀಡಿದರು.


ಪ್ರಸ್ತುತ ಹೇಮಾವತಿ ಜಲಾಶಯದಲ್ಲಿ 29 ಟಿ.ಎಂ.ಸಿ ನೀರಿದೆ. ಇನ್ನು 08 ಟಿ.ಎಂ.ಸಿ ನೀರು ಬಂದರೆ ಜಲಾಶಯ ತುಂಬುತ್ತದೆ.. ಹೇಮಾವತಿ ನದಿಗೆ 6758 ಕ್ಯೂಸೆಕ್ಸ್ ಒಳಹರಿವಿದೆ. ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ಮುಖಾಂತರ ತುಮಕೂರು ಭಾಗಕ್ಕೆ 2800 ಕ್ಯೂಸೆಕ್ಸ್ ಹಾಗೂ ಮಂಡ್ಯ ಭಾಗಕ್ಕೆ 1200 ಕ್ಯೂಸೆಕ್ಸ್ ನೀರಿನ ಅಗತ್ಯವಿದೆ. ಹೇಮಾವತಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 04 ಸಾವಿರ ಕ್ಯೂಸೆಕ್ಸ್ ನೀರು ಹರಿಸಿದರೂ 2758 ಕ್ಯೂಸೆಕ್ಸ್ ನೀರು ಹೆಚ್ಚುವರಿಯಾಗಿ ಜಲಾಶಯಕ್ಕೆ ಹರಿದು ಬರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನಮಗೆ ಬೆಳೆ ಬೆಳೆಯಲು ನೀರು ಬೇಡ. ಆದರೆ ಜನ ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಿ. ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟವೂ ಸುಧಾರಿಸಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ. ಕೆ.ಆರ್.ಎಸ್ ಅಣೆಕಟ್ಟೆ ಭಾಗದ ಕಾಲುವೆಗಳಿಗೆ ನೀರು ಹರಿಸಿದ ರಾಜ್ಯ ಸರ್ಕಾರ ಹೇಮಾವತಿ ಜಲಾನಯನ ಪ್ರದೇಶದ ರೈತರ ಬಗ್ಗೆ ಮೌನವಾಗಿದೆ. ಕೆರೆಕಟ್ಟೆಗಳನ್ನು ಜಲಾಶಯದ ನೀರಿನಿಂದ ತುಂಬಿಸುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನಾಡಿನ ರೈತರಿಗೆ ಭರವಸೆ ನಿಡಿದ್ದರೂ ಅದು ಇದುವರೆಗೂ ಜಾರಿಗೆ ಬಂದಿಲ್ಲ. ಹೇಮೆಯ ಬಗೆಗಿನ ಸರ್ಕಾರದ ತಾರತಮ್ಯ ಸಲ್ಲದು. ನೀರಾವರಿ ಇಲಾಖೆಯ ಅಧಿಕಾರಿಗಳು ಈ ಬಾಗದ ರೈತರ ಅಸಹನೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಹೇಮಾವತಿ ನೀರಿನಿಂದ ಕೆರೆ ಕಟ್ಟೆಗಳನ್ನು ತುಂಬಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಆಗಸ್ಟ್ 11 ರಿಂದ ನೀರಿಗಾಗಿ ರೈತರ ಹೋರಾಟ ಆರಂಭವಾಗಲಿದೆ ಎಂದು ಎಚ್ಚರಿಸಿದರು.


ಹೇಮಾವತಿ ಜಲಾಶಯದ ನಂ.03 ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ನಾಗರಾಜು, ಕರೋಟಿ ತಮ್ಮಯ್ಯ, ಸಿಂಧುಘಟ್ಟ ಪ್ರಸನ್ನ ಮತ್ತಿತರರಿದ್ದರು.