
ಸಂಜೆವಾಣಿ ವಾರ್ತೆ
ಹನೂರು ಆ 9 :- ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ಅಭಿಯಾನದಡಿ ಬಿ.ಜೆ.ಪಿ ಓ.ಬಿ.ಸಿ ಮೋರ್ಚಾ ವತಿಯಿಂದ 90 ನೇ ಉಚಿತ ನೇತ್ರ ತಪಾಸಣೆ ಮತ್ತು ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಚಾಮರಾಜನಗರ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನ : 7ರ ಬುಧವಾರದಂದು ಶಿಬಿರ ನಡೆಯಿತು. ಚಾಮರಾಜನಗರ ಜಿಲ್ಲಾ ಬಿ.ಜೆ.ಪಿ ಓ.ಬಿ.ಸಿ ಮೋರ್ಚಾ ಅಧ್ಯಕ್ಷ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಮುಖಂಡ ಜನಧ್ವನಿ ಬಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಬಿ.ಜೆ.ಪಿ ಹಾಗೂ ಓ.ಬಿ.ಸಿ ಮೋರ್ಚಾ ವತಿಯಿಂದ ನಿರಂತರವಾಗಿ ಸೇವಾ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಗುಡ್ಡಗಾಡು ಪ್ರದೇಶದ ಜನರನ್ನು ತಲುಪಿ ಸೇವೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ, ರಾಜಕೀಯ ಲಾಭಕ್ಕಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ “ಸೇವೆಯೇ ಸಂಘಟನೆ” ಆದರ್ಶದಂತೆ ಕೆಲಸ ಮಾಡುತ್ತಿದ್ದೇವೆ ಎಂದರು.
ಕಳೆದ 8 ವರ್ಷಗಳಿಂದ ಹನೂರು ಕ್ಷೇತ್ರದಲ್ಲಿ ಉಚಿತ ಕಣ್ಣಿನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ 20 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಆಪರೇಷನ್ ಮಾಡಿಸಲಾಗಿದೆ. ಅವಶ್ಯಕತೆ ಇರುವವರಿಗೆ ಕನ್ನಡಕವನ್ನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಇಂದಿನ ಶಿಬಿರದಲ್ಲಿ ಒಟ್ಟು 220 ಜನರು ತಪಾಸಣೆಗೆ ಒಳಪಟ್ಟಿದ್ದು, ಅವರಲ್ಲಿ 130 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ವೃಷಭೇಂದ್ರಸ್ವಾಮಿ, ಮುರುಗೇಶ್, ಜಿಲ್ಲಾ ಉಪಾಧ್ಯಕ್ಷ ನಟರಾಜ್ ಗೌಡ್ರು, ಓ.ಬಿ.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಮೋರ್ಚಾ ಅಧ್ಯಕ್ಷರ ಮಹೇಶ್, ಬಸವರಾಜು, ಗುರುಪಾದಸ್ವಾಮಿ, ಮಾದೇಶ್, ಮುನೇಶ್, ರವಿ, ಮಂಡಲ ಪ್ರಧಾನ ಕಾರ್ಯದರ್ಶಿ ವರಪ್ರಸಾದ್, ಜಯಪ್ರಕಾಶ್, ವಿಜೇಂದ್ರಮೂರ್ತಿ,
ರಂಗಧಾಮಚಾರ್, ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಡು, ಉಪಾಧ್ಯಕ್ಷರಾದ ಮಹದೇವಸ್ವಾಮಿ, ಕಾಂತರಾಜು, ರಾಜಪ್ಪ, ಮುಖಂಡರಾದ ಅನಂತಪದ್ಮನಾಭ ಗುಪ್ತ, ರಮೇಶ್ ಉಪ್ಪಾರ್, ಸುಬ್ಬಣ್ಣ, ಪುಟ್ಟರಾಜು, ಚಿನ್ನಮುತ್ತು, ಲೋಕೇಶ್, ಜೆಟ್ಟಿ ಮಹಾದೇವ, ಮಲ್ಲಿಕಾರ್ಜುನಸ್ವಾಮಿ, ಜಾಫರ್, ಅರವಿಂದ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.


























