Home ಜಿಲ್ಲೆ ಮೈಸೂರು ಎಸ್.ಐ.ಆರ್ ಬಗ್ಗೆ ಜಾಗೃತಿ ಅಭಿಯಾನ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ್ರು ಚಾಲನೆ

ಎಸ್.ಐ.ಆರ್ ಬಗ್ಗೆ ಜಾಗೃತಿ ಅಭಿಯಾನ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ್ರು ಚಾಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜು.02:
ಮತದಾರರ ಪಟ್ಟಿ ಪರಿಸ್ಕರಣೆ ಮಾಡುವ ನೆಪದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಲುವಾಗಿ ಎಸ್‍ಐಆರ್ ಎಂಬ ಹೊಸ ಯೋಜನೆಯ ಮೂಲಕ ಬಿಜೆಪಿ ವಿರುದ್ಧ ಇರುವ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಸುತ್ತಿದ್ದಾರೆ ಆದ್ದರಿಂದ ಪರಿಸ್ಕರಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ವಹಿಸ ಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.


ಪಟ್ಟಣದ ಐಎಂಎ ಭವನದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ವತಿಯಿಂದ ಏರ್ಪಡಿಸಿದ್ದ ಎಸ್‍ಐಆರ್ ಜನಜಾಗೃತಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿಯವರು ಎಸ್‍ಐಆರ್ ಬಳಕೆ ಮಾಡಿಕೊಂಡು ಪಶ್ಚಿಮಬಂಗಾಳದಲ್ಲಿ 91ಲಕ್ಷ ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡಿ ಅಧಿಕಾರಕ್ಕೆ ಬಂದಿರುವುದನ್ನು ಕಾಣುತ್ತಿದ್ದೇವೆ ಎಂದರು.


ಈ ಹಿಂದೆ ಉತ್ತರ ಕರ್ನಾಟಕದ ಸಂಸದರಾಗಿದ್ದ ಅನಂತ್‍ಕುಮಾರ್ ಹೆಗಡೆ ಹೇಳಿದಂತೆ ಬಿಜೆಪಿಯವರ ಅಜೆಂಡ ಸಂವಿಧಾನ ಬದಲಾವಣೆ ಮಾಡುವುದಾಗಿದೆ, ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿರುವ ಸಮಾನತೆಯ ಸಂವಿಧಾನ ಬಿಜೆಪಿಗೆ ಬೇಕಾಗಿಲ್ಲ ಅದಕ್ಕಾಗಿ ಎಸ್‍ಐಆರ್ ನಂತಹ ಜನ ವಿರೋಧಿ ಯೋಜನೆಗಳನ್ನು ಅನುಷ್ಠಾನ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಎಸ್‍ಐಆರ್‍ನಿಂದ ಹಲವು ರಾಜ್ಯಗಳಲ್ಲಿ ಲಾಭ ಪಡೆದಿರುವ ಬಿಜೆಪಿಯವರು ಕೇರಳ ರಾಜ್ಯದ ಚುನಾವಣೆಯಲ್ಲಿ ಅಧಿಕಾಕ್ಕೆ ಬರಲು ಸಾಧ್ಯವಾಗಲಿಲ್ಲ ಇದಕ್ಕೆ ಕೇರಳ ರಾಜ್ಯದ ಜನತೆಯ ಶಿಕ್ಷಣವೇ ಮುಖ್ಯ ಎಂದು ತಿಳಿಸಿದ ದೊಡ್ಡಸ್ವಾಮೇಗೌಡ ನಮ್ಮ ರಾಜ್ಯದ ಜನರು ಎಸ್‍ಐಆರ್‍ಗೆ ನೊಂದಣಿ ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮಾಡುವ ಮೂಲಕ ಅರ್ಹ ಮತದಾರರಾಗಬೇಕು ಎಂದು ಮನವಿ ಮಾಡಿದರು.


ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಎಸ್.ರವಿ ಮಾತನಾಡಿ ಮತದಾರರ ಪಟ್ಟಿಯ ಪರಿಸ್ಕರಣೆಗೆ ವಿರುದ್ದವಿಲ್ಲ, ಬಿಜೆಪಿಯವರು ಅಧಿಕಾರಕ್ಕೆ ಬರುವ ಸಲುವಾಗಿ ಮಾಡುತ್ತಿರುವು ಎಸ್‍ಐಆರ್‍ಗೆ ವಿರುದ್ದವಿದ್ದು ದಲಿತ ಮತ್ತು ಹಿಂದುಳಿದ ಸಮಾಜದವರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನ ಉಳಿಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.


ಜಾಗೃತಿ ಶಿಬಿರ ಕುರಿತು ಮೋಹನ್ ಉಪನ್ಯಾಸ ನೀಡಿದರು. ಕಾಂಗ್ರೆಸ್ ಮುಖಂಡರಾದ ಡಿವಿಗುಡಿ ನಂದೀಶ್, ಪುಟ್ಟಸ್ವಾಮಿ, ಶಾಂತಿರಾಜ್,ಮಂಜುನಾಥ್, ರಾಮಕೃಷ್ಣ, ಎಂ.ಹೆಚ್.ಸ್ವಾಮಿ, ರಮೇಶ್, ಕೃಷ್ಣ, ಮಹಾಲಿಂಗ, ರಾಜಯ್ಯ, ಸಿದ್ದಯ್ಯ, ಕೃಷ್ಣಯ್ಯ, ರಾಮಯ್ಯ, ಗುರು, ನಂಜಯ್ಯ, ಹೆಚ್.ಎಸ್.ಸ್ವಾಮಿ, ಮಹದೇವಸ್ವಾಮಿ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.