
ಹಿಮಾಲಯವು ಭಾರತೀಯ ಉಪಖಂಡದ ಕಿರೀಟ ಮತ್ತು ಏಷ್ಯಾದ ಸಮಗ್ರ ಪರಿಸರ ವ್ಯವಸ್ಥೆಯ ಶ್ವಾಸಕೋಶವಾಗಿದೆ. ವಿಶ್ವದ ಅತ್ಯಂತ ಎತ್ತರದ ಪರ್ವತ ಶ್ರೇಣಿಯಾದ ಹಿಮಾಲಯವು ಭಾರತಕ್ಕೆ ಕೇವಲ ಭೌಗೋಳಿಕ ಎಲ್ಲೆಯಾಗಿರದೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಪರಿಸರ ಸಂಪತ್ತಿನ ಅಮೂಲ್ಯ ಸಂಕೇತವಾಗಿದೆ. ಆದರೆ ಆಧುನಿಕ ನಗರೀಕರಣ, ಜಾಗತಿಕ ತಾಪಮಾನ ಮತ್ತು ನಿಯಂತ್ರಣವಿಲ್ಲದ ಪ್ರವಾಸೋದ್ಯಮದಿಂದಾಗಿ ಈ ಸೂಕ್ಷ್ಮ ಪರ್ವತ ವ್ಯವಸ್ಥೆಯು ಇಂದು ತೀವ್ರ ಸಂಕಷ್ಟದಲ್ಲಿದೆ.
ಹಿಮಾಲಯವು ವನ್ಯಜೀವಿ ಸಂರಕ್ಷಣೆ ಮತ್ತು ದೇಶವನ್ನು ತೀವ್ರ ಹವಾಮಾನ ಪರಿಸ್ಥಿತಿಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ “ಭೂಮಿಯ ಮೇಲಿನ ಸ್ವರ್ಗ” ಎಂದು ಕರೆಯಲ್ಪಡುವ ಹಿಮಾಲಯವು ಭಾರತದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಈ ಪರ್ವತ ಶ್ರೇಣಿಯು ಭೌಗೋಳಿಕತೆ, ಜೀವಶಾಸ್ತ್ರ ಮತ್ತು ಸಂಸ್ಕೃತಿಯಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ.ಹಿಮಾಲಯ ಶ್ರೇಣಿಯು ಪಶ್ಚಿಮ-ವಾಯುವ್ಯದಿಂದ ಪೂರ್ವ-ಆಗ್ನೇಯಕ್ಕೆ 2,400 ಕಿಲೋಮೀಟರ್ಗಳಷ್ಟು ವಿಸ್ತರಿಸಿದ್ದು, ಪಶ್ಚಿಮಕ್ಕೆ ನಂಗಾ ಪರ್ಬತ್ ಮತ್ತು ಪೂರ್ವಕ್ಕೆ ನಾಮ್ಚಾ ಬರ್ವಾ ಇದರ ನೆಲೆಯಾಗಿದೆ. ಉತ್ತರ ಹಿಮಾಲಯವು ಕಾರಕೋರಂ ಮತ್ತು ಹಿಂದೂ ಕುಶ್ ಪರ್ವತಗಳಿಂದ ಸುತ್ತುವರೆದಿದೆ. ಸಿಂಧೂ-ತ್ಸಾಂಗ್ಪೋ ಹೊಲಿಗೆಯು 50 ರಿಂದ 60 ಕಿಲೋಮೀಟರ್ ಅಗಲದ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಟಿಬೆಟಿಯನ್ ಪ್ರಸ್ಥಭೂಮಿಯಿಂದ ಉತ್ತರಕ್ಕೆ ಇದನ್ನು ಬೇರ್ಪಡಿಸುತ್ತದೆ. ಹಿಮಾಲಯವು ದಕ್ಷಿಣಕ್ಕೆ ಇಂಡೋ-ಗಂಗಾ ಬಯಲಿನ ಎದುರು ಇದೆ. ಹಿಮಾಲಯವು ಪಶ್ಚಿಮದಲ್ಲಿ 350 ಕಿಲೋಮೀಟರ್ ಅಗಲ ಮತ್ತು ಪೂರ್ವದಲ್ಲಿ 150 ಕಿಲೋಮೀಟರ್ ಅಗಲವಿದೆ.
ಈ ಹಿನ್ನೆಲೆಯಲ್ಲಿ ಹಿಮಾಲಯದ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ಪ್ರಪಂಚಕ್ಕೆ ನೆನಪಿಸಲು ಪ್ರತಿ ವರ್ಷ ಸೆಪ್ಟೆಂಬರ್ 9 ರಂದು ಹಿಮಾಲಯ ದಿನವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ಈ ವಿಶೇಷ ದಿನವನ್ನು ಪ್ರಾರಂಭಿಸುವಲ್ಲಿ ಪರಿಸರ ಪ್ರೇಮಿ ಹಾಗೂ ಸಂಸ್ಥೆಯಾದ ಹೆಸ್ಕೋದ ಸಂಸ್ಥಾಪಕ ಡಾ. ಅನಿಲ್ ಪ್ರಕಾಶ್ ಜೋಶಿ ಮತ್ತು ಇತರ ಪರಿಸರವಾದಿಗಳ ಕೊಡುಗೆ ಅಪಾರವಾಗಿದೆ. 2010 ರ ಮೇಘಸ್ಪೋಟ ಹಾಗೂ 2013 ರ ಕೆದಾರನಾಥ ಜಲಪ್ರಳಯದಂತಹ ಭೀಕರ ನೈಸರ್ಗಿಕ ವಿಕೋಪಗಳು ಹಿಮಾಲಯದ ಪರಿಸರ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿದವು. ಈ ಹಿನ್ನೆಲೆಯಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳುವ ತುರ್ತು ಅಗತ್ಯವನ್ನು ಸಾರಲು 2014 ರಲ್ಲಿ ಉತ್ತರಾಖಂಡ ಸರ್ಕಾರವು ಅಧಿಕೃತವಾಗಿ ಸೆಪ್ಟೆಂಬರ್ 9 ರಂದು ಹಿಮಾಲಯ ದಿನವೆಂದು ಘೋಷಿಸಿತು. ಪ್ರತಿ ವರ್ಷವೂ ಈ ದಿನವನ್ನು ನಿರ್ದಿಷ್ಟ ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು, ಜಾಗತಿಕ ತಾಪಮಾನದಿಂದ ಹಿಮಾಲಯವನ್ನು ರಕ್ಷಿಸುವುದು, ಹಿಮನದಿಗಳ ಉಳಿವು ಹಾಗೂ ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಹಿಮಾಲಯದ ಪ್ರಾಮುಖ್ಯತೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ವಿಸ್ತರಿಸಿದೆ. ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ಏಷ್ಯನ್ ನದಿಗಳಿಗೆ ಹಿಮಾಲಯವೇ ಮೂಲವಾಗಿದ್ದು, ಕೋಟಿಗಟ್ಟಲೆ ಜನರಿಗೆ ಇದು ಕುಡಿಯುವ ನೀರು ಮತ್ತು ಕೃಷಿಗೆ ಆಸರೆಯಾಗಿದೆ. ಭಾರತದ ಮಾನ್ಸೂನ್ ಮಾರುತಗಳನ್ನು ತಡೆದು ದೇಶದಾದ್ಯಂತ ಸೂಕ್ತ ಸಮಯಕ್ಕೆ ಉತ್ತಮ ಮಳೆಯಾಗುವಂತೆ ಮಾಡುವಲ್ಲಿ ಹಿಮಾಲಯದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಜೊತೆಗೆ ಹಿಮಚಿರತೆಯಂತಹ ಅಪರೂಪದ ವನ್ಯಜೀವಿಗಳು ಮತ್ತು ಸಾಂಪ್ರದಾಯಿಕ ವೈದ್ಯಕೀಯದಲ್ಲಿ ಬಳಕೆಯಾಗುವ ಅಸಂಖ್ಯಾತ ಗಿಡಮೂಲಿಕೆಗಳಿಗೆ ಇದು ನೈಸರ್ಗಿಕ ನಿವಾಸವಾಗಿದೆ.
ಆದಾಗ್ಯೂ, ಪ್ರಸ್ತುತ ದಿನಗಳಲ್ಲಿ ಹಿಮಾಲಯವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ದಿಢೀರ್ ಪ್ರವಾಹಗಳು ಮತ್ತು ನದಿಗಳ ಇಂಗುವಿಕೆಗೆ ಕಾರಣವಾಗುತ್ತಿವೆ. ಅತಿಯಾದ ಪ್ರವಾಸೋದ್ಯಮದಿಂದಾಗಿ ಪರ್ವತ ಶ್ರೇಣಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಾಂದ್ರತೆ ಹೆಚ್ಚುತ್ತಿದೆ ಹಾಗೂ ಅನಿಯಂತ್ರಿತವಾಗಿ ಬಂಡೆಗಳನ್ನು ಸ್ಫೋಟಿಸಿ ನಡೆಸುವ ಮೂಲಸೌಕರ್ಯ ನಿರ್ಮಾಣಗಳು ಭೂಕುಸಿತಕ್ಕೆ ದಾರಿಮಾಡಿಕೊಡುತ್ತಿವೆ.
ಕೊನೆಯದಾಗಿ, ಹಿಮಾಲಯವು ಕೇವಲ ಒಂದು ಪರ್ವತ ಶ್ರೇಣಿಯಲ್ಲ, ಅದು ನಮಗೆ ಜೀವನಾಧಾರ ನೀಡುವ ಜೀವಂತ ವ್ಯವಸ್ಥೆಯಾಗಿದೆ. ಹಿಮಾಲಯ ದಿನವು ಕೇವಲ ಒಂದು ದಿನದ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ನಿಸರ್ಗದ ಜೊತೆ ಸೌಹಾರ್ದಯುತವಾಗಿ ಜೀವಿಸುವ ಪ್ರತಿಯೊಬ್ಬರ ಸಂಕಲ್ಪಕ್ಕೆ ಕಾರಣವಾಗಬೇಕು. ಪರಿಸರಸ್ನೇಹಿ ಪ್ರವಾಸೋದ್ಯಮ ಮತ್ತು ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ಹಿಮಾಲಯದ ವೈಭವ ಮತ್ತು ಸಂಪತ್ತನ್ನು ಸುರಕ್ಷಿತವಾಗಿ ಹಸ್ತಾಂತರಿಸಲು ಸಾಧ್ಯ.























