
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.27 ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರೊಂದಿಗೆ ಗ್ರಾಮ ಒನ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು. ಕರ್ತವ್ಯ ಲೋಪವೆಸಗಿದರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶೃತಿ ಅವರು ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ತಾಲೂಕು ಆಡಳಿತದ ವತಿಯಿಂದ ಶನಿವಾರ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ, ಅವರು ಹಲವು ಮನವಿಗಳಿಗೆ ತಕ್ಷಣದ ಸ್ಪಂದಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 270 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ ಮನೆ, ನಿವೇಶನಕ್ಕೆ ಸಂಬಂಧಿಸಿದಂತೆ 220, ಪಡಿತರ ಚೀಟಿಗಾಗಿ 10 ಹಾಗೂ ಪಿಂಚಣಿಗೆ ಸಂಬಂಧಿಸಿದಂತೆ 5 ರಿಂದ 6 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.
ತಕ್ಷಣ ಪಡಿತರ ಚೀಟಿ:
ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಮಾರುತಿ ಕಾಲೋನಿಯ ದೃಷ್ಟಿವಿಕಲಚೇತನ ವ್ಯಕ್ತಿಯೊಬ್ಬರ ಮನೆ ಬೆಂಕಿಗಾಹುತಿಯಾಗಿ, ಯಾವುದೇ ಗುರುತಿನ ಚೀಟಿ ಇಲ್ಲದೆ ಸಂಕಷ್ಟದಲ್ಲಿದ್ದರು. ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದನ್ನು ಮನಗಂಡ ತಹಶೀಲ್ದಾರ್, ವೈದ್ಯಕೀಯ ಕಾರಣಕ್ಕಾಗಿ ತಕ್ಷಣವೇ ಪಡಿತರ ಚೀಟಿ ಒದಗಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು.
ವೃದ್ಧೆಗೆ ಆಸರೆ:
ಗುರುತಿನ ಚೀಟಿ, ದಾಖಲೆಗಳಿಲ್ಲದೆ ಕಷ್ಟಪಡುತ್ತಿದ್ದ ವೃದ್ಧೆಯೊಬ್ಬರ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ಅಗತ್ಯವಿರುವ ಅಧಿಕೃತ ದಾಖಲೆಗಳನ್ನು ಜಾಲತಾಣಗಳಲ್ಲಿ ಪರಿಶೀಲಿಸಲಾಗುವುದು. ಇಲಾಖೆಯ ಅಧಿಕೃತ ಜಾಲತಾಣಗಳಲ್ಲಿ ಲಭ್ಯವಿದ್ದರೆ ಸೋಮವಾರ ದಾಖಲೆ ನೀಡಲಾಗುವುದು. ಇಲ್ಲವಾದಲ್ಲಿ ಶೀಘ್ರವಾಗಿ ದಾಖಲೆ ಮಾಡಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಮುಖ್ಯಮಂತ್ರಿಗಳ ಆಶಯದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ಹಾಗೂ ದಿನನಿತ್ಯದ ಕುಂದುಕೊರತೆಗಳನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು IPಉಖS ಪೋರ್ಟಲ್ ಮೂಲಕ ಅರ್ಜಿ ಅಥವಾ ತಮ್ಮ ಅಹವಾಲು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣ ಸ್ಥಳದಲ್ಲೇ ಅಧಿಕೃತ ಸ್ವೀಕೃತಿ ರಶೀದಿ ಪಡೆಯಬೇಕು. ಸಲ್ಲಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಪರಿಹಾರ ಕಲ್ಪಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಆಲಂ ಭಾಷ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮನೋಹರ್, ಲೋಕೋಪಯೋಗಿ ಇಲಾಖೆ ಅಧಿಕಾರಿ ರವಿಕುಮಾರ್, ಜೆಸ್ಕಾಂ ಎಇಇ ಜಾನ್ ವೆಸ್ಲಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ವಿಜಯ್ ಕುಮಾರ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ವಿನೋದ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.























