
ಸಂಜೆವಾಣಿ ನ್ಯೂಸ್
ಮೈಸೂರು, ಆ.27:- ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಸೆ.8ರವರೆಗೆ ಆಯೋಜಿಸಿರುವ ಹಾಥ್ ಕರ್ಗ್-ಉತ್ಸವ ನನ್ನ ಕೈಮಗ್ಗ ನನ್ನ ಹೆಮ್ಮೆ ಶೀರ್ಷಿಕೆ ಅಡಿಯ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬುಧವಾರ ಚಾಲನೆ ದೊರೆಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‍ನಾಥ್ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೇಳದಲ್ಲಿ ನೇಕಾರರೇ ನೇಯ್ದ ಉತ್ಪನ್ನಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಸಿಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೇಕಾರರಿಗೆ ಬೆಂಬಲ, ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಮೇಳದಲ್ಲಿ ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ರೇಷ್ಮೆ, ಕಾಟನ್ ಸೀರೆ, ಕಸೂತಿ ಸೀರೆ, ಬೆಡ್‍ಶೀಟ್, ನೆಲಹಾಸು ಸೇರಿದಂತೆ ವಿವಿಧ ಕೈಮಗ್ಗ ಉತ್ಪನ್ನಗಳು, ತಮಿಳುನಾಡಿನ ಕಾಂಜೀವರಂ ಸೀರೆ, ಬಿಹಾರ ಮತ್ತು ಜಾರ್ಖಂಡ್‍ನ ತಸ್ಸರ್ ಸೀರೆ, ಪಶ್ಚಿಮ ಬಂಗಾಳದ ಕಾಂತಾ ಮತ್ತು ಬಾಲುಚರಿ ಸೀರೆ, ಉತ್ತರ ಪ್ರದೇಶದ ಬನಾರಸಿ ಸಿಲ್ಕ್, ಚಿಕನ್ ಎಂಬ್ರಾಯಿಡರಿ ಸೀರೆ, ಮಧ್ಯಪ್ರದೇಶದ ಚಂದೇರಿ ಮತ್ತು ಮಹೇಶ್ವರಿ ಸೀರೆ, ಒಡಿಶಾದ ಸಂಬಲ್ಪುಪಿ, ಇಕ್ಕತ್ ಮತ್ತು ಬೋಂಕಾಯಿ ಸೀರೆಗಳು, ಇನ್ನಿತರ ಕೈಮಗ್ಗದ ಉತ್ಪನ್ನಗಳು ನೇಕಾರರಿಂದ ನೇರವಾಗಿ ಗ್ರಾಹಕರ ಕೈಗೆ ಸೂಕ್ತ ದರದಲ್ಲಿ ತಲುಪಲಿವೆ. ವೀಕ್ಷಿಸಲು ಸಹಾ ಅವಕಾಶವಿದೆ.
ಗೌರಿ-ಗಣೇಶ ಹಬ್ಬದ ಖರೀದಿಗೆ ವಿಶೇಷ ಅವಕಾಶವಾಗಿರುವ ಈ ಮೇಳದಲ್ಲಿ ಸಾರ್ವಜನಿಕರು ನೇಕಾರರಿಂದ ನೇರವಾಗಿ ಗುಣಮಟ್ಟದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಮೇಳ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿರಲಿದ್ದು, ಪ್ರವೇಶ ಉಚಿತವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಮೈಸೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಕೈಮಗ್ಗ ನೇಕಾರರನ್ನು ಪೆÇ್ರೀತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಬೆಂಗಳೂರಿನ ಕಾವೇರಿ ಹ್ಯಾಂಡ್‍ಲೂಮ್ ವ್ಯವಸ್ಥಾಪಕಿ ನಿರ್ದೇಶಕಿ ಸೌಮ್ಯ, ಛೇರ್ಮನ್ ಗಣೇಶ್, ಜೆಎಸ್‍ಎಸ್ ಶಿಕ್ಷಣ ಸಮುಚ್ಛಯಗಳ ಉಪ ನಿರ್ದೇಶಕ ಇಳಂಗೋವನ್, ಸಂಯೋಜಕ ರಾಕೇಶ್ ರೈ, ಸುಂರದಪ್ಪ ಸೇರಿದಂತೆ ಹಲವರು ಇದ್ದರು.

































