Home ಜಿಲ್ಲೆ ಮಂಗಳೂರು ಸಹೋದರಿಯನ್ನ ಹತ್ಯೆಗೈದ ಪ್ರಕರಣ; ಆರೋಪಿಗೆ ೪ ವರ್ಷ ಜೈಲು ಶಿಕ್ಷೆ, ದಂಡ

ಸಹೋದರಿಯನ್ನ ಹತ್ಯೆಗೈದ ಪ್ರಕರಣ; ಆರೋಪಿಗೆ ೪ ವರ್ಷ ಜೈಲು ಶಿಕ್ಷೆ, ದಂಡ

ಮಂಗಳೂರು-ಸಹೋದರಿಯ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ, ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ೪ ವರ್ಷ ಜೈಲು ಶಿಕ್ಷೆ ಹಾಗೂ ೧೦,೦೦೦ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿರುತ್ತದೆ.
ಕಂಬಳಪದವು ನಿವಾಸಿ ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ, ೨೦೧೯ರ ಅಕ್ಟೋಬರ್ ೮ ರಂದು ಮಧ್ಯಾಹ್ನ ೧೨ ಗಂಟೆಗೆ ಆತನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಎಂಬವಳೊಂದಿಗೆ ಮೊಬೈಲ್ ನ್ನು ಉಪಯೋಗಿಸಲು ಕೊಡುವಂತೆ ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮೊಬೈಲ್ ವಿಚಾರವಾಗಿ ವಿವಾದ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿಯು ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿರುತ್ತಾನೆ.
ಮೃತ ಸ್ವೀಡಲ್ ಕುಟಿನ್ಹಾ ರವರ ತಂದೆ ಪ್ರಾನ್ಸಿಸ್ ಕುಟಿನ್ಹಾ ಅವರು ಮಗಳು ಕಾಣೆಯಾಗಿರುವ ಬಗ್ಗೆ ದೂರು ಠಾಣೆಯಲ್ಲಿ ಮೊ.ನಂ ೬೭/೨೦೧೯ ಕಲಂ ೩೬೩ ಐಪಿಸಿಯಂತೆ ಪ್ರಕರಣ ದಾಖಲಿಸಿರುತ್ತಾರೆ. ನಂತರ ಈ ಪ್ರಕರಣವನ್ನು ತನಿಖೆ ನಡೆಸಿದ ಎಸಿಪಿ ದಕ್ಷಿಣ, ಟಿ. ಕೋದಂಡ ರಾಮ್ ಅವರು ಮಾನ್ಯ ನ್ಯಾಯಾಲಯಕ್ಕೆ ಕಲಂ ೩೦೨, ೨೦೧ ಐಪಿಸಿ ಪ್ರಕಾರ ೨೦೨೦ರ ಜನವರಿ ೧೦ ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.
ಆ.೨೪ ರಂದು ಮಾನ್ಯ ೨ ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾಗೆ ಕಲಂ ೩೦೪ (ii) ಐಪಿಸಿಗೆ ೪ ವರ್ಷ ಸಜೆ ಮತ್ತು ೧೦,೦೦೦ರೂ. ದಂಡ, ಕಲಂ ೨೦೧ ಐಪಿಸಿ ಗೆ ೧ ವರ್ಷ ಸಜೆ ಮತ್ತು ೧,೦೦೦ರೂ. ದಂಡವನ್ನು ವಿಧಿಸಿರುತ್ತದೆ. ಅಭಿಯೋಜನ ಪರವಾಗಿ ಜ್ಯೋತಿ ಪ್ರಮೋದ ನಾಯಕ್ ರವರು ವಾದಿಸಿರುತ್ತಾರೆ.