
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.5 ಸಮಾಜದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಜೊತೆಗೆ ಅವರಿಗೆ ಶಿಕ್ಷಣ ಸೇರಿದಂತೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಮೂಹ ಮಾಧ್ಯಮಗಳು ಸಾಕಷ್ಟು ಶ್ರಮಿಸುತ್ತಿರುವುದನ್ನು ನಾವಿಂದು ನೋಡಬಹುದಾಗಿದೆ ಎಂದು ಪಿಹೆಚ್.ಡಿ ಸಂಶೋಧನಾರ್ಥಿ ಲಕ್ಷಿ್ಮ ಜಿ.ಬಿ. ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಮಂಗಳವಾರ ಜರುಗಿದ ಪಾಕ್ಷಿಕ ಮಾತು ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಸಮೂಹ ಮಾಧ್ಯಮಗಳು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಮೂಹ ಮಾಧ್ಯಮಗಳಲ್ಲಿ ಮಹಿಳೆಯರ ಚಿತ್ರಣವು ಇಂದಿನ ಸಮಾಜದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪತ್ರಿಕೆ, ದೂರದರ್ಶನ, ಚಲನಚಿತ್ರ, ರೇಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ವಿವಿಧ ಪಾತ್ರಗಳಲ್ಲಿ ಚಿತ್ರಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯ ಬೆಳವಣಿಗೆಯ ಹಿಂದೆ ಸಮೂಹ ಮಾಧ್ಯಮಗಳು ಉತ್ತಮ ಪಾತ್ರವನ್ನು ನಿರ್ವಹಿಸುತ್ತಿವೆ.
ಶಿಕ್ಷಣ, ಕ್ರೀಡೆ, ಉದ್ಯೋಗ, ಉದ್ಯಮ, ಇತ್ಯಾದಿ ವಿವಿಧ ರಂಗಗಳಲ್ಲಿ ಮಹಿಳೆ ಇಂದು ಮುಂದೆ ಬರಬೇಕಾಗಿದೆ. ವೈಚಾರಿಕ ಜೀವನ ಅಳವಡಿಸಿಕೊಳ್ಳಲು ಸಮೂಹ ಮಾಧ್ಯಮಗಳು ಪ್ರೇರಕವಾಗಿವೆ. ಸಮೂಹ ಮಾಧ್ಯಮಗಳು ಇಂದು ದೇಶದ ಅಭಿವೃದ್ಧಿಯಲ್ಲಿ ಕಾನೂನು ಪಾಲನೆ ವಿಷಯಗಳಲ್ಲಿ ಮುಂದುವರಿಯಲೂ ಸಮೂಹ ಮಾಧ್ಯಮಗಳೇ ಕಾರಣವಾಗಿವೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಉದ್ಯೋಗ, ಚುನಾವಣೆ ಇತ್ಯಾದಿ ವಿವಿಧ ರಂಗಗಳಲ್ಲಿ ಮೀಸಲಾತಿ ಪಡೆದುಕೊಳ್ಳಲು, ಶಿಕ್ಷಣ ವಾತಾವರಣವನ್ನು ತಿಳಿಗೊಳಿಸಲು ಸಮಾನತೆ ಮತ್ತು ಸಾಮಾಜಿಕ ಸಮಸ್ಯೆ, ಲಿಂಗ ತಾರತಮ್ಯ, ಮೌಢ್ಯ ಸಂಪ್ರದಾಯಗಳ ವಿರುದ್ಧ ಪ್ರತಿರೋಧ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಮೂಲಕ ಹೋರಾಡಲು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮೂಹ ಮಾಧ್ಯಮಗಳು ಪ್ರಮುಖ ಸಾಧನಗಳಾಗಿವೆ ಎಂದು ಹೇಳಿದರು.
ಮಹಿಳೆಯರ ಆರೋಗ್ಯಕರ ಬೆಳವಣಿಗೆ ಕೌಟುಂಬಿಕ ಕಲಹಗಳು, ಹಿಂಸೆ, ಅಸೂಯೆ, ಅವಿಭಕ್ತ ಕುಟುಂಬಗಳ ನಿರ್ನಾಮ, ಲೈಂಗಿಕ ಕಿರುಕುಳ, ಬಾಲ್ಯ ವಿವಾಹ, ವರದಕ್ಷಿಣೆ, ಮಾನವ ಕಳ್ಳ ಸಾಗಾಣೆ, ಅಸಮಾನತೆ, ಮಹಿಳೆಯರ ಹಕ್ಕು ಬಾಧ್ಯತೆಗಳು, ಆನ್ಲೈನ್ ಕಿರುಕುಳ, ಅವಹೇಳನಕಾರಿ ಭಾಷೆ ಮತ್ತು ತಪ್ಪು ಮಾಹಿತಿಯಂತಹ ಸಮಸ್ಯೆಗಳು ಮಹಿಳೆಯರ ಸುರಕ್ಷರತೆ ಮತ್ತು ಸ್ವಾತಂತ್ರ್ಯಕ್ಕೆ ಸವಾಲಾಗಿವೆ ಮತ್ತು ಪುರುಷ ಪ್ರಧಾನ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳು ಮಹಿಳೆಯರ ಬೆಳವಣಿಗೆಗೆ ಕುಂಠಿತವಾಗಿವೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಸಮೂಹ ಮಾಧ್ಯಮಗಳು ಧ್ವನಿ ಎತ್ತಬೇಕಾಗಿದೆ ಎಂದರು.
ಗುಳೇದಗುಡ್ಡದ ಗುರುಸಿದ್ಧ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷ ಉಪನ್ಯಾಸದ ಸಂಚಾಲಕರು ಹಾಗೂ ಪ್ರಾಧ್ಯಾಪಕರಾದ ಡಾ.ತಾರಿಹಳ್ಳಿ ಹನುಮಂತಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹ ಸಂಚಾಲಕರಾದ ಕುಮಾರ್ ಡಿ.ಬಿ. ಸೇರಿದಂತೆ ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಶೋಧನಾ ವಿದ್ಯಾರ್ಥಿ ರಾಮಾಂಜನೇಯ ನಿರೂಪಿಸಿ, ವಂದಿಸಿದರು.































