
ಸಂಜೆವಾಣಿ ನ್ಯೂಸ್
ಮೈಸೂರು, ಸೆ.24:- ಶಿಕ್ಷಣ ವ್ಯವಸ್ಥೆ ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಹಾಗೂ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳುವ ದಿಕ್ಕಿನಲ್ಲಿ ಮಾರ್ಗದರ್ಶನ ನೀಡುವಂತಿರಬೇಕು ಎಂದು ವಿಶ್ರಾಂತ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಹೇಳಿದರು.
ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಬಹುತ್ವ ಭಾರತ ಜನಪರ ಸಂಘ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಗಂಗೋತ್ರಿ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ಪರಿಸ್ಥಿತಿ ಗಮನಿಸಿದರೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಪದವಿ ಪಡೆದವರ ಪೈಕಿ ಸುಮಾರು ಶೇ.45ರಷ್ಟು ಮಂದಿ ಉದ್ಯೋಗದಲ್ಲಿಲ್ಲ ಅಥವಾ ಉದ್ಯೋಗಕ್ಕಾಗಿ ಸಕ್ರಿಯವಾಗಿ ಪ್ರಯತ್ನಿಸುತ್ತಿಲ್ಲ ಎಂಬ ಅಂಕಿ-ಅಂಶಗಳಿವೆ. ಕರ್ನಾಟಕದಲ್ಲಿ ಪದವೀಧರ ಮಹಿಳೆಯರಲ್ಲಿಯೂ ನಿರುದ್ಯೋಗದ ಪ್ರಮಾಣ ಗಣನೀಯವಾಗಿದೆ. ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿದವರಲ್ಲಿ ನೇರವಾಗಿ ಉದ್ಯೋಗ ಪಡೆಯುವ ಅವಕಾಶವೂ ಸೀಮಿತವಾಗಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ತೀವ್ರ ಪೈಪೆÇೀಟಿ ಇದೆ. ಕೆಲವು ಪರೀಕ್ಷೆಗಳಲ್ಲಿ ಯಶಸ್ಸಿನ ಪ್ರಮಾಣ ಶೇ.0.1ರಿಂದ 0.2ರಷ್ಟಿರುವ ಉದಾಹರಣೆಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಆಪ್ಟಿಟ್ಯೂಡ್, ಕೋರ್ ಸಬ್ಜೆಕ್ಟ್, ಸಾಮಾನ್ಯ ಇಂಗ್ಲಿಷ್ ಅಥವಾ ಕನ್ನಡ ಹಾಗೂ ಸಾಮಾನ್ಯ ಜ್ಞಾನ ವಿಭಾಗಗಳಿರುತ್ತವೆ. ಆಪ್ಟಿಟ್ಯೂಡ್ನಲ್ಲಿ ವೇಗ, ತಾರ್ಕಿಕ ಚಿಂತನೆ ಮತ್ತು ನಿರಂತರ ಅಭ್ಯಾಸ ಅಗತ್ಯ. ವಿಷಯಾಧಾರಿತ ಜ್ಞಾನವನ್ನು ಕೇವಲ ನೆನಪಿನಲ್ಲಿಟ್ಟುಕೊಳ್ಳುವುದಕ್ಕಿಂತ ಅದನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಸಂವಹನ ಕೌಶಲ್ಯವೂ ಯುವಕರಿಗೆ ಅತ್ಯಗತ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯಗಳ ಜವಾಬ್ದಾರಿ ಕೇವಲ ಪದವಿ ಪ್ರದಾನಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳುವ ದಾರಿ, ಉದ್ಯೋಗಾವಕಾಶಗಳ ಮಾಹಿತಿ ಹಾಗೂ ಅಗತ್ಯ ಕೌಶಲ್ಯಗಳ ಕುರಿತು ಮಾರ್ಗದರ್ಶನ ನೀಡಬೇಕು. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿ ಘಟಕಾಧಾರಿತ ಹಾಗೂ ಸೆಮಿಸ್ಟರ್ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ಸಿಗುತ್ತಿರುವುದರಿಂದ ಆಳವಾದ ಅಧ್ಯಯನಕ್ಕೆ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಸಮಯ ಮೀಸಲಿಡಬೇಕಿದೆ ಎಂದು ಹೇಳಿದರು.
ಯುವಕರಿಗಾಗಿ ಸಂಘದ ವತಿಯಿಂದ ಕೆರಿಯರ್ ಹಬ್ ಸ್ಥಾಪಿಸಿ ಒಂದು ದಿನದ ಕಾರ್ಯಾಗಾರಗಳು, ಮಾಸಿಕ ಕಾರ್ಯಕ್ರಮಗಳು ಹಾಗೂ ವಿಸ್ತೃತ ತರಬೇತಿ ಸರಣಿ ಆಯೋಜಿಸುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಕಾರ್ಯಾಗಾರದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಮಲೈ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಟಿ.ಪಿ.ವಿಜಯರಾಜ್, ಖಜಾಂಚಿ ಡಾ.ಎನ್.ಮಲ್ಲಿಕಾರ್ಜುನ ಸ್ವಾಮಿ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.


























