Home ಜಿಲ್ಲೆ ವಚನಗಳನ್ನು ಹಾಡುವುದಕ್ಕಿಂತ ಗಾಯನ ಮಾಡುವುದು ಸೂಕ್ತ-ವಿಜಯ ಕುಮಾರ ಕಮ್ಮಾರ

ವಚನಗಳನ್ನು ಹಾಡುವುದಕ್ಕಿಂತ ಗಾಯನ ಮಾಡುವುದು ಸೂಕ್ತ-ವಿಜಯ ಕುಮಾರ ಕಮ್ಮಾರ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.25 ವಚನಗಳನ್ನು ಹಾಡುವುದಕ್ಕಿಂತ ಗಾಯನ ಮಾಡುವುದು ಅತ್ಯಂತ ಸೂಕ್ತ ಎಂದು ತುಮಕೂರಿನ ಶರಣ ಸಾಹಿತಿಗಳು ಹಾಗೂ ವಚನ ಸಂಗೀತಗಾರರು ಆದ ವಿಜಯ ಕುಮಾರ ಕಮ್ಮಾರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಶುಕ್ರವಾರ ಜರುಗಿದ ‘ಕರ್ನಾಟಕದಲ್ಲಿ ವಚನ ಗಾಯನ ಪರಂಪರೆ’ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, ಕರ್ನಾಟಕ ವಚನ ಗಾಯನ ಪರಂಪರೆ ಎನ್ನುವ ವಿಷಯ ಕುರಿತ ಮಾತನಾಡಿದ ಅವರು. ಕರ್ನಾಟಕದಲ್ಲಿ ವಚನ ಗಾಯನ ಆರಂಭಗೊಂಡದ್ದು 1974ರ ಸುಮಾರಿನಲ್ಲಿ. ನಂತರ ಪಂ. ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನಸೂರು, ಬಸವರಾಜ ರಾಜಗುರು ಇಂತಹ ಹಿಂದೂಸ್ತಾನಿ ಸಂಗೀತಗಾರರು ಮುಂದುವರೆಸುವ ಮೂಲಕ ದೊಡ್ಡ ಪರಂಪರೆಯನ್ನು ನಿರ್ಮಿಸಿದರು.

ವಚನ ಗಾಯನ ಅಷ್ಟು ಸುಲಭವಾದದ್ದಲ್ಲ. ವಚನಗಳ ಭಾವ, ಅರ್ಥ, ಧ್ವನಿಯನ್ನು ಅರ್ಥಮಾಡಿಕೊಂಡು ರಾಗ ಸಂಯೋಜನೆ ಮಾಡಬೇಕು. ಅಂದಾಗ ವಚನ ಗಾಯನಕ್ಕೆ ತನ್ನದೇ ಆದ ಮೆರಗು ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸವಿತಾ ಪಿ. ಮಾತನಾಡಿ,  ವಿದ್ಯಾರ್ಥಿಗಳು ಸಂಗೀತ ಅಭ್ಯಾಸದ ಕಡೆಗೆ ಹೆಚ್ಚಿನ ಒತ್ತುಕೊಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಮಾತನಾಡಿ, ವಚನಗಳು ಭಾವಜನ್ಯವಾಗಿರುವುದರಿಂದ ಹಾಡುವುದಕ್ಕಿಂತ ಗಾಯನ ಮಾಡಬೇಕು. ಗಾಯನದಲ್ಲಿ ರಾಗ, ತಾಳ ಮತ್ತು ಲಯ, ಮುಖ್ಯವಾಗಿರುತ್ತದೆ. ಅಂತಹ ಒಳ್ಳೆಯ ಗಾಯಕರು ನೀವಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಹೆಚ್. ನಿರ್ವಹಿಸಿದರು.