Home ಜಿಲ್ಲೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಜಾಗ ನೀಡಿದ ನಿವಾಸಿಗಳ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಜಾಗ ನೀಡಿದ ನಿವಾಸಿಗಳ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.25 ನಗರದ ಹಂಪಿ ರಸ್ತೆಯಲ್ಲಿನ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ತಮ್ಮ ಮನೆಗಳನ್ನು ತೆರವು ಮಾಡುವ ಮೂಲಕ ಜಾಗ ನೀಡಿದ ಸ್ಥಳೀಯ ನಿವಾಸಿಗಳ ಋಣ ತೀರಿಸಲಾಗದು ಎಂದು ಶಾಸಕ ಹೆಚ್.ಆರ್. ಗವಿಯಪ್ಪ ಹೇಳಿದರು.

ನಗರದ ಅನಂತಶಯನಗುಡಿ ಹತ್ತಿರ ಶುಕ್ರವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಮನೆ ಕಳೆದುಕೊಂಡವರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಸ್ವಂತ ಮನೆಯನ್ನು ತೆರವುಗೊಳಿಸುವುದು ಸಣ್ಣ ವಿಷಯವಲ್ಲ. ಮಕ್ಕಳಿಗೆ ಪೆಟ್ಟು ಬಿದ್ದರೆ ತಾಯಂದಿರಿಗೆ ಎಷ್ಟೋ ನೋವಾಗುತ್ತದೆಯೋ, ಕಟ್ಟಿಸಿದ ಮನೆ ಒಡೆದಾಗಲೂ ಅಷ್ಟೇ ನೋವಾಗುತ್ತದೆ. ಆದಾಗ್ಯೂ, ಊರಿನ ಅಭಿವೃದ್ಧಿ ಹಿತದೃಷ್ಟಿಯಿಂದ ಜಾಗ ಬಿಟ್ಟುಕೊಟ್ಟು ದೊಡ್ಡ ಮನಸ್ಸು ಮಾಡಿದ್ದೀರಿ ಎಂದು ಅನಂತಶಯನಗುಡಿ ನಿವಾಸಿಗಳ ತ್ಯಾಗವನ್ನು ಸ್ಮರಿಸಿದರು. ಸಂತ್ರಸ್ತರಿಗೆ ನೀಡಲಾಗಿರುವ ಜಾಗದಲ್ಲಿ ಲೇಔಟ್ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

 ಸಂತ್ರಸ್ತರಿಗೆ ಸಿಗಬೇಕಾದ ಹಣಕಾಸಿನ ನೆರವು ಹಾಗೂ ವಸತಿ ಮಂಡಳಿಯಿಂದ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಮೂರು ವರ್ಷಗಳ ಈ ಸುದೀರ್ಘ ಪ್ರಯತ್ನದಲ್ಲಿ ಅಧಿಕಾರಿಗಳ ತಂಡದ ಶ್ರಮ ಶ್ಲಾಘನೀಯ ಎಂದರು.

ಸಹಾಯಕ ಆಯುಕ್ತರಾದ ಪಿ. ವಿವೇಕಾನಂದ ಮಾತನಾಡಿ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆನಂದಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಶಾಸಕರ ಶ್ರಮದಿಂದ ಅಂತಿಮ ರೂಪ ಪಡೆದುಕೊಂಡಿದೆ. ಸಂತ್ರಸ್ತರಿಗೆ ಕೇವಲ ಪರಿಹಾರ ಧನಕ್ಕೆ ಕಾಯಿಸದೆ, ಅವರಿಗೆ ತಕ್ಷಣವೇ ನಿವೇಶನಗಳನ್ನು ಗುರುತಿಸಿ, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅಗತ್ಯ ಲೇಔಟ್ ಪ್ಲಾನ್ ಸಿದ್ಧಪಡಿಸಿ ಒಟ್ಟು 48 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

 ಹಕ್ಕುಪತ್ರ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು ‘ಫಾರ್ಮ್-3’ ಪಡೆದುಕೊಳ್ಳಬೇಕು. ಹಕ್ಕು ಪತ್ರ ಪಡೆದ 48 ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯನ್ನು ಒಂದೇ ದಿನ ಪೂರ್ಣಗೊಳಿಸಲು ಆಗಸ್ಟ್ ತಿಂಗಳ 3ನೇ ವಾರದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸ್ಲಾಟ್ ಬುಕ್ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ತಹಶೀಲ್ದಾರ್ ಶೃತಿ.ಎಂ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್,  ನಗರಸಭೆ 7ನೇ ವಾರ್ಡ್ ಸದಸ್ಯರಾದ ಕನಕಮ್ಮ, ಡಿವೈಎಸ್ಪಿ ಪಿ.ಮುರಳೀಧರ ಮುಖಂಡರಾದ  ಅಯ್ಯಾಳಿ ತಿಮ್ಮಪ್ಪ, ಅಯ್ಯಾಳಿ ಶಂಕ್ರಪ್ಪ, ತಿಪ್ಪೇಸ್ವಾಮಿ, ಅಯ್ಯಾಳಿ ವೆಂಕಟಸ್ವಾಮಿ, ಅಂಜಿನಪ್ಪ ಸೇರಿದಂತೆ ಮತ್ತಿತರರು ಇದ್ದರು.