Home ಸಿನೆಮಾ ಬಹುಭಾಷೆಗಳಲ್ಲಿ ಮೂಡಿಬರುತ್ತಿರುವ ಹಾರರ್ ಥ್ರಿಲ್ಲರ್ ‘KA-18’

ಬಹುಭಾಷೆಗಳಲ್ಲಿ ಮೂಡಿಬರುತ್ತಿರುವ ಹಾರರ್ ಥ್ರಿಲ್ಲರ್ ‘KA-18’

ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ‘KA-18’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಹಿರಿಯ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಮನೋಜ್ ಕ್ಯಾಮೆರಾ ಚಾಲನೆ ನೀಡಿದರು.

ಅಪ್ಪಾಜಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹಿರೇಮಗಳೂರಿನ ಎ.ಟಿ.ಎಂ. ಮಂಜು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅವರೇ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ. ‘KA-18’ ಚಿತ್ರಕ್ಕೆ ಮೋಹನ್ ಚಿಕ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದಾಗಿದೆ.

ಚಿತ್ರದಲ್ಲಿ ಎ.ಟಿ.ಎಂ. ಮಂಜು, ತನಿಷಾ ಕುಪ್ಪಂಡ ಹಾಗೂ ಸೋನಿಯಾ ರಾವುತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದೀಪು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವರ್ಧನ್, ವಿಜಿ, ಪೂಜಾ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಶಶಿಕುಮಾರ್ ಜೆ.ಕೆ. ಸಾಹಿತ್ಯ, ಮುಂಜಾನೆ ಮಂಜು ಛಾಯಾಗ್ರಹಣ, ರಘು ಶಿವರಾಮ್ ಸಂಕಲನ ಹಾಗೂ ವೈಲೆಂಟ್ ವೇಲು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮೋಹನ್ ಚಿಕ್ಕಿ, “ಎರಡು ಪ್ರಮುಖ ಪಾತ್ರಗಳ ಸುತ್ತ ಸಾಗುವ ಕಥೆ ಇದು. ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ನಡೆಯುವ ಘಟನೆಗಳ ಸುತ್ತ ಕಥೆ ಹೆಣೆದಿದ್ದು, ಹಲವು ಕುತೂಹಲಕಾರಿ ತಿರುವುಗಳು ಪ್ರೇಕ್ಷಕರನ್ನು ಸೆಳೆಯಲಿವೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ರೂಪಿಸಿದ್ದೇವೆ” ಎಂದರು.

ನಿರ್ಮಾಪಕ ಹಾಗೂ ನಾಯಕ ಎ.ಟಿ.ಎಂ. ಮಂಜು ಮಾತನಾಡಿ, “ವರ್ಷಗಳ ಹಿಂದೆ ಕೆಮ್ಮಣ್ಣುಗುಂಡಿ ಪ್ರವಾಸದ ವೇಳೆ ಕಂಡ ನೈಜ ಘಟನೆಯೊಂದು ಈ ಚಿತ್ರದ ಕಥೆಗೆ ಪ್ರೇರಣೆಯಾಗಿದೆ. ಮೂಲಭೂತ ಸೌಕರ್ಯಗಳಿಲ್ಲದ ಕಾಡುಮಾರ್ಗದಲ್ಲಿ ನಡೆಯುವ ಸಂಶೋಧನಾ ಪ್ರಯಾಣದ ವೇಳೆ ಎದುರಾಗುವ ವಿಚಿತ್ರ ಘಟನೆಗಳು ಹಾಗೂ ಮೂಢನಂಬಿಕೆಯ ಹಿನ್ನೆಲೆಯನ್ನು ಚಿತ್ರದ ಮೂಲಕ ಅನಾವರಣಗೊಳಿಸುತ್ತಿದ್ದೇವೆ” ಎಂದು ತಿಳಿಸಿದರು.

ನಟಿ ತನಿಷಾ ಕುಪ್ಪಂಡ, “ಅಂಕಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಾಡಿನ ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪ್ರಯಾಣಿಸುವ ಸಂದರ್ಭ ಎದುರಾಗುವ ಅನಿರೀಕ್ಷಿತ ಘಟನೆಗಳು ಕಥೆಯ ಪ್ರಮುಖ ಅಂಶ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಪ್ರಶ್ನೆಗೆ ಉತ್ತರ ನೀಡುವ ಕುತೂಹಲಭರಿತ ಕಥಾಹಂದರ ಚಿತ್ರದಲ್ಲಿದೆ” ಎಂದು ಹೇಳಿದರು.

ಮುಹೂರ್ತದಂದೇ ಗಮನ ಸೆಳೆದಿರುವ ‘KA-18’ ಹಾರರ್-ಸಸ್ಪೆನ್ಸ್ ಥ್ರಿಲ್ಲರ್ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲು ಸಜ್ಜಾಗಿದೆ.