
( ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆ (ಹೆಚ್.ಎಲ್.ಸಿ) ಗೆ ಇಂದು ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಂದು ನೀರನ್ನು ಹರಿಸಲಾಗಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಅಧಿಕಾರಿಗಳು ಕಲಬುರ್ಗಿ, ತುಂಗಭದ್ರ ಜಲಾಶಯದ ಮುಖ್ಯ ಅಭಿಯಂತರರು ಹಾಗೂ ತುಂಗಭದ್ರ ಬೋರ್ಡಿನ ಮುಖ್ಯ ಕಾರ್ಯದರ್ಶಿಯವರಲ್ಲಿ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಇಂದು ತುಂಗಭದ್ರ ಬೋರ್ಡಿನ ಸೂಪರಿಂಟೆಂಡೆಂಟ್ ಇಂಜಿನೀಯರ್ ನಾರಾಯಣ ನಾಯಕ, ಎಕ್ಸ್ ಕ್ಯೂಟಿವ್ ಇಂಜಿನೀಯರ್ ಚಂದ್ರಶೇಖರ ಮತ್ತು ಜಲಾಶಯದ ನೀರಿನ ಸಮತೋಲನ ಇಂಜಿನೀಯರ್ ಗುರುಕಿರಣ್ ಇವರು ಕಾಲುವೆಯ ತಾಂತ್ರಿಕ ಉಪಕರಣಗಳಿಗೆ ಪೂಜೆ ಸಲ್ಲಿಸಿ. ಕರ್ನಾಟಕ ಪಾಲಿನ ನೀರನ್ನು ಬಿಡಲು
ಆರಂಭಿಸಿದರು. ನಾಡಿದ್ದು ಸೋಮವಾರದಿಂದ ಈ ಕಾಲುವೆಗೆ ಆಂಧ್ರದ ಪಾಲಿನ ಕುಡಿಯುವ ನೀರನ್ನು ಸಹ ಬಿಡಲಿದ್ದಾರಂತೆ.
ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಳ್ಳಾರಿ, ವಿಜಯನಗರ, ರಾಯಚೂರು ಹಾಗು ಕೊಪ್ಪಳ ಜಿಲ್ಲೆಗಳ ಕಾಲುವೆಗಳು ಮುಖಾಂತರ ರೈತರ ಬೆಳೆಗಳಿಗೆ ನೀರು ಕೊಡಬೇಕೆಂದು ಪುರುಷೋತ್ತಮಗೌಡ ಸರ್ಕಾರವನ್ನು ಈ ವೇಳೆ ಒತ್ತಾಯಿಸಿದ್ದಾರೆ.





























