
ಸಂಜೆವಾಣಿ ವಾರ್ತೆ
ಮಂಡ್ಯ:ಆ.30:-ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ವರದಿ ನೀಡಿದರೂ ಹೇಗೆ ಕೆಲಸ ಕೊಟ್ರಿ ಪ್ರಿಯಾಂಕ್ ಖರ್ಗೆ. ಒ.ಎಂ.ಆರ್ ತಿದ್ದಲಾಗಿದೆ, ಭ್ರಷ್ಟಾಚಾರ ನಡೆದಿದೆ ಎಂದು ಸಾಬೀತಾದ್ರೂ ಯಾಕೆ ನೇಮಕಾತಿ ಮಾಡಿದ್ರಿ. ಇದಕ್ಕೆ ಉತ್ತರ ಕೊಡಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು
ನಗರದಲ್ಲಿ ಮಾಧ್ಯಮ ದವರೊಂದಿಗೆ ಅವರು ಮಾತನಾಡಿ, ‘2022ರಲ್ಲಿ ಕೆಪಿಎಸ್ಸಿ ನೋಟಿಫಿ ಕೇಷನ್ ಆಗಿತ್ತು. 2024ರಲ್ಲಿ ಕೆಲಸ ಕೊಡುವ ತೀರ್ಮಾನ ಮಾಡಲಾಗಿತ್ತು. ಅಕ್ರಮದ ಬಗ್ಗೆ ವರದಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಯವರೇ ಸದನದಲ್ಲಿ ಉತ್ತರ ಕೊಟ್ಟಿದ್ದರು. ಯಾಕೆ ಕೋರ್ಟ್ಗೆ ಹೋಗಲಿಲ್ಲ. ಅಕ್ರಮ, ಹಗರಣ ಮುಚ್ಚಿ ಹಾಕೋಕಾ? ನೇಮಕಾತಿ ಮಾಡಿದ್ದಲ್ಲದೇ, ಆರೋಪಿಗಳಿಗೆ ಇಲ್ಲಿವರೆಗೂ ಸಂಬಳ ಕೊಟ್ಟುಕೊಂಡು ಬಂದಿದ್ದೀರಾ. ಆರೋಪಿಗಳ ರಕ್ಷಣೆ ಮಾಡೋದು ಹೀಗಾ?’ ಎಂದು ವಾಗ್ದಾಳಿ ನಡೆಸಿದರು.
ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘?87 ಕೋಟಿ ಹಗರಣದಿಂದ ಕಾಂಗ್ರೆಸ್ಗೆ ಆಗುತ್ತಿರುವ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾ? ಕುಮಾರಸ್ವಾಮಿ ಮೇಲೆ ಇರೋದು ರಾಜಕೀಯ ಆರೋಪ ಮಾತ್ರ. ನಾನು ದುಡ್ಡು ಹೊಡೆದಿದ್ದೇನೆ ಎಂದಲ್ಲ. 14 ವರ್ಷಗಳಿಂದ ಆರೋಪವನ್ನು ಜೀವಂತ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಬಾಯಿ ಮುಚ್ಚಿಸಲು ಆಗಲ್ಲ. ನಾನು ಸಿಎಂ ಆಗಿದ್ದಾಗ ಮುಚ್ಚಿ ಹಾಕಬಹುದಿತ್ತು. ಆದರೂ ಹಾಗೆಯೇ ಬಿಟ್ಟಿದ್ದೇನೆ’ ಎಂದು ತಿರುಗೇಟು ನೀಡಿದರು.
ಹಗರಣ ಮಾಡಿದ್ರೆ ರಾಜೀನಾಮೆ ನೀಡುತ್ತೇನೆ’ ಎಂಬ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ‘ಮಾಗಡಿಯಲ್ಲಿ ಸರ್ಕಾರ ಹಣ ಖರ್ಚು ಮಾಡಿ ಅಭಿವೃದ್ಧಿ ಕಾರ್ಯಕ್ರಮ ಮಾಡಿತ್ತು. ಆಗ ?600 ಕೋಟಿ ಅವ್ಯವಹಾರ ಆಗಿದೆ ಎಂದು ಸದನ ಸಮಿತಿ ರಚಿಸಿದ್ದರು. ಆ ವರದಿ ಎಲ್ಲಿ ಹೋಗಿದೆ?’ ಎಂದು ಪ್ರಶ್ನಿಸಿದರು.
ಆರೋಪ ಮಾಡೋದೆ ಕುಮಾರಸ್ವಾಮಿ ಕೆಲಸ’ ಎಂಬ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಆರೋಪ ಮಾಡ್ತಿಲ್ಲ, ನಡೆದಿರುವ ಅಕ್ರಮದ ಬಗ್ಗೆ ದಾಖಲೆ ಸಹಿತ ಹೇಳ್ತಿದ್ದೀನಿ. ಆರೋಪಿತರಿಗೆ ಕೆಲಸ ಕೊಟ್ಟಿದ್ದೀರಲ್ಲ ಪರಮೇಶ್ವರ್ ಅವರೇ, ಅಕ್ರಮ ಸಾಬೀತಾಗಿರುವ ದಾಖಲೆ ಕೊಟ್ಟರೂ ಗಂಧದ ಕಡ್ಡಿ ಬೆಳಗಿಕೊಂಡು ಕುಳಿತಿದ್ದೀರಪ್ಪ. ನೀವೇ ಆವಾಗ ಗೃಹಸಚಿವರು. ನೀವು ಏನ್ ಮಾಡಿದ್ರಿ. ಅದಕ್ಕೆ ಉತ್ತರ ಕೊಡಿ’ ಎಂದು ಕುಟುಕಿದರು.

































