
ಸಂಜೆವಾಣಿ ವಾರ್ತೆ
ಹನೂರು.ಆ.11:- ಮಲೆ ಮಹದೇಶ್ವರ ವನ್ಯಧಾಮ ವಲಯ ವ್ಯಾಪ್ತಿಯಲ್ಲಿ ಫಾರೆಸ್ಟ್ ವಾಚರ್ ಮಹದೇವಸ್ವಾಮಿ ಎಂಬುವರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ 5 ಲಕ್ಷ ತಾತ್ಕಾಲಿಕ ಪರಿಹಾರದ ಚೆಕ್ ಅನ್ನು ಸೋಮವಾರ ವಿತರಣೆ ಮಾಡಲಾಯಿತು. ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ ಮಾಲತಿಪ್ರಿಯಾ ಮಾತನಾಡಿ ಮಹದೇವಸ್ವಾಮಿ ಅವರು ಕಳೆದ ಹತ್ತು ವರ್ಷಗಳಿಂದಲೂ ಪ್ರಾಮಾಣಿಕತೆಯಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಸಾವು ಅತ್ಯಂತ ನೋವಿನ ಸಂಗತಿಯಾಗಿದೆ. ಅರಣ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಪರಿಹಾರವಾಗಿ 5 ಲಕ್ಷ ನೀಡಲಾಗಿದೆ.
ಉಳಿದಂತೆ ಸರ್ಕಾರದಿಂದ ಬರುವ 25 ಲಕ್ಷ ಪೂರ್ಣ ಪರಿಹಾರವನ್ನು ಕೊಡಿಸಿಕೊಡಲು ಶ್ರಮಿಸಲಾಗುವುದು. ಜೊತೆಗೆ ಮೃತರ ಪತ್ನಿಗೆ ಅನುಕಂಪದ ಆಧಾರದ ಉದ್ಯೋಗ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಅವರು ಇಲಾಖೆಯಲ್ಲಿ ಕರ್ತವ್ಯು ನಿರ್ವಹಿಸುವ ಸಿಬ್ಬಂದಿ ಅರಣ್ಯದೊಳಗೆ ಗಸ್ತು ತಿರುಗುವ ವೇಳೆ ಸದಾ ಎಚ್ಚರಿಕೆಯಿಂದಿರಬೇಕು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಜೊತೆಗೆ ಅದನ್ನು ಕಾಯುವ ಸಿಬ್ಬಂದಿಯ ಪ್ರಾಣವೂ ಅತ್ಯಂತ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಸಿಬ್ಬಂದಿ ಜಾಗರೂಕತೆಯಿಂದ ಇರಬೇಕು ಎಂದು ತಿಳಿಸಿದರು.


































