Home ಜಿಲ್ಲೆ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.5 ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಹೊರಡಿಸಿರುವ ಅಂತಿಮ ಅಧಿಸೂಚನೆ ಪ್ರಕಾರ ಕನಿಷ್ಠ ವೇತನ ಜಾರಿ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊರ ಗುತ್ತಿಗೆ ನೌಕರರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆ ಮುಖಾಂತರ ಅಂತಿಮ ಅಧಿಸೂಚನೆ ಪ್ರಕಟಿಸಿ, ದಿ.22-05-2026 ರಿಂದ ಹೊಸ ಕನಿಷ್ಠ ವೇತನ ಜಾರಿಗೆ ಆದೇಶ ಮಾಡಿದೆ. ಹೊಸಪೇಟೆ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು, ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕನಿಷ್ಠ ವೇತನ ಜಾರಿಗೆ ತಿಳಿಸಿದ್ದಾರೆ.

ಅದರಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆಯ ಅಧಿಸೂಚನೆ ಅನ್ವಯ ಕನಿಷ್ಠ ವೇತನ ನಿಗಧಿಪಡಿಸಿ, ಹೊರ ಗುತ್ತಿಗೆ ನೌಕರರ ಸಂಬಳ ಪಾವತಿಸಲು ಸೂಚನೆ ನೀಡಿದ್ದಾರೆ.

ಆದರೆ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೈಸ್ತ ವಸತಿ ಶಾಲೆಗಳಲ್ಲಿ ಮತ್ತು  ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೇ ತಿಂಗಳ 10 ದಿನ ಮತ್ತು ಜೂನ್, ಜುಲೈ ವೇತನವನ್ನು ಹೊಸದಾಗಿ ಜಾರಿಯಾಗಿರುವ ಕನಿಷ್ಠ ವೇತನ ಪ್ರಕಾರ ಪಾವತಿ ಮಾಡದೆ ಇರುವುದರಿಂದ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳ ಜಂಟಿ ಸಭೆ ನಡೆಸಿ, ಕನಿಷ್ಠ ವೇತನ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಿ.ತಾಯಪ್ಪ ನಾಯಕ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ತ ಮೊರಾರ್ಜಿ ವಸತಿ ಶಾಲೆಗಳು ಮತ್ತು ಹಂಪಿ ಕವಿವಿಯಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಕೂಡಲೇ ಕನಿಷ್ಠ ವೇತನ ನೀಡಬೇಕು. ಹೊರ ಗುತ್ತಿಗೆ ನೌಕರರಿಗೆ ಹೊರ ಗುತ್ತಿಗೆ ಸಂಪನ್ಮೂಲ ಏಜೆನ್ಸಿಗಳಿಂದ ನೇಮಕಾತಿ ಆದೇಶ, ಸರ್ವೀಸ್ ಸರ್ಟಿಪೀಕೇಟ್, ಸಮವಸ್ತ್ರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಕಳೆದ 20 ವರ್ಷಗಳಿಂದ ದಿನಗೂಲಿ ಹಾಗೂ ಹೊರ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂ ಮಾಡಬೇಕು. ಇಲ್ಲವೇ ವಯೋ ನಿವೃತ್ತಿವರೆಗೆ ಸೇವಾ ಭದ್ರತೆ ನೀಡಬೇಕು. ವಾರಕ್ಕೊಮ್ಮೆ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಾಗೂ ನಾಯ್ಕ್, ಮುಖಂಡರಾದ ತಿಮ್ಮಪ್ಪ, ಎಂ.ಚಂದ್ರಶೇಖರ್, ಪರಸಪ್ಪ, ದುರುಗೇಶ್. ಶಿವಪ್ಪ, ರಮೇಶ್, ರಾಘವೇಂದ್ರ, ಪವಿತ್ರ, ಪ್ರೇಮ, ಕಾಳಮ್ಮ, ಸೀತಮ್ಮ, ಅಂಬಿಕಾ, ಸರೋಜ, ರಾಧಾ, ತಾಯಮ್ಮ, ಹುಲಿಗೆಮ್ಮ, ರಾಮಕ್ಕ ಸೇರಿದಂತೆ ಹೊರ ಗುತ್ತಿಗೆ ನೌಕರರು ಭಾಗವಹಿಸಿದ್ದರು.