
* ಮೇಲ್ನೋಟಕ್ಕೆ ನಿಯಮ ಉಲ್ಲಂಘನೆ ಆಗಿಲ್ಲ.
* ವಾಸ್ತವ ಪರಿಶೀಲಿಸಿ ವರದಿ ಸಲ್ಲಿಕೆ.
* 800 ರೂ ಧರಕ್ಕೂ ಖರೀದಿಗೆ ಜನ ಬಂದಿಲ್ಲ.
* ಮೂಲೆ ನಿವೇಶನಗಳ ಅಲಾಟ್ ಸ್ಥಗಿತ
* ಪರಶೀಲನೆ ವರದಿ ಬರಲಿ ಸತ್ಯಾಂಶ ತಿಳಿಯಲಿದೆ.
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.1: ಮಾರುಕಟ್ಟೆ ಧರಕ್ಕಿಂತ ಕಡಿಮೆ ಧರದಲ್ಲಿ ಟೆಂಡರ್ ಮಾಡಲಾಗಿದೆ ಎಂಬ ಆರೋಪ ಮತ್ತು ವರದಿಗಳ ಹಿನ್ನಲೆಯಲ್ಲಿ ಎಪಿಎಂಸಿ ನಿರ್ದೇಶನಾಲಯದ ತಂಡ ಇಂದು ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.
ಈ ನಿವೇಶನವನ್ನು ಸಬ್ ರಿಜಿಸ್ಟರ್ ಕಚೇರಿ ನಿಗಧಿ ಮಾಡಿರುವ ಭೂ ಬೆಲೆಯಂತೆ ಟೆಂಡರ್ ಕರೆಯಲಾಗಿತ್ತು. ಅದಕ್ಕೂ ಹೆಚ್ಚಿನ ಧರದಲ್ಲಿ ಕಾಕರ್ಲತೋಟದ ವಿಜಯಕುಮಾರ್ ಅವರಿಗೆ ಟೆಂಡರ್ ಆಗಿದೆ. ಅದನ್ನು ಅವರಿಗೆ ಹಸ್ತಾಂತರಿಸುವ ಮುನ್ನ ಕಡಿಮೆ ಬೆಲೆಗೆ ಹರಾಜು ಆಗಿದೆಂಬ ಆರೋಪದ ಹಿನ್ನಲೆಯಲ್ಲಿ ತಡೆಹಿಡಿದಿದೆ. ಜೊತೆಗೆ ಡಿಸಿಯವರು ಬರೆದ ಪತ್ರದ ಹಿನ್ನಲೆಯಲ್ಲಿ ನಾಳೆ ಈ ತಂಡ ಪರಿಶೀಲನೆಗೆ ಆಗಮಿಸುತ್ತಿದೆ ಎಂದು ಇಂದು ನಿವೃತ್ತಿ ಹೊಂದುತ್ತಿರುವ ಎಪಿಎಂಸಿಯ ಕಾರ್ಯದರ್ಶಿ ವಿ..ಅರ್ ವಿಜಯಕುಮಾ್ ತಿಳಿಸಿದ್ದಾರೆ.
ವಿಜಯಕುಮಾರ್ ಅವರ ಸ್ಥಾನದಲ್ಲಿ ನಾಳೆಯಿಂದ ಪ್ರಭಾರ ಕಾರ್ಯದರ್ಶಿಯಾಗಿ ಉಪ ನಿರ್ದೇಶಕ ಓಂಕಾರ ಅವರು ನೇಮಕಗೊಂಡಿದ್ದಾರೆ.
ಬಳ್ಳಾರಿ ಡಿಸಿ ಕೆ. ನಾಗೇಂದ್ರ ಪ್ರಸಾದ್ ಅವರ ವರದಿಯ ಮೇಲೆ ಎಪಿಎಂಸಿ ಇಲಾಖೆಯ ನಿರ್ದೇಶಕ ಎ.ಎಂ.ಯೋಗೀಶ್ ಅವರು ಸ್ಥಳಕ್ಕೆ ತೆರಳಿ ವಾಸ್ತವ ವರದಿ ನೀಡುವಂತೆ ಸೂಚಿಸಿದ ನಿರ್ದೇಶನದಂತೆ ಕಲ್ಬುರ್ಗಿ ವಿಭಾಗದ ಹೆಚ್ಚುವರಿ ನಿರ್ದೇಶಕ ಅಲ್ಲಾಭಕ್ಷಿ ನೇತೃತ್ವದ ತ್ರಿ ಸದಸ್ಯರ ತಂಡದಲ್ಲಿ ರಾಯಚೂರು ಎಪಿಎಂಸಿಯ ಕಾರ್ಯದರ್ಶಿ ಆದೆಪ್ಪ ಕಾರ್ಯನಿರ್ವಾಹಕ ಇಂಜಿನೀಯರ್ ಅರುಣ್ ಕುಮಾರ್ ಅವರು ಪರಿಶೀಲನೆ ನಡೆಸಿದರು.
ಈ ವೇಳೆ ಬಳ್ಳಾರಿ ಎಪಿಎಂಸಿಯ ಪ್ರಭಾರಿ ಕಾರ್ಯದರ್ಶಿ. ಓಂಕಾರ, ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಉಪಾಧ್ಯಕ್ಷ ಕಪ್ಪಗಲ್ಲಿನ ಬಿ.ರಾಮಪ್ಪ ಮೊದಲಾದವರು ಉಪಸ್ಥಿತರಿದ್ದರು.
ಈ ವೇಳೆ ಸಂಜೆವಾಣಿಯೊಂದಿಗೆ ಮಾತನಾಡಿದ ತಂಡದ ನೇತೃತ್ವವ ವಹಿಸಿದ್ದ. ಅಲ್ಲಾಭಕ್ಷಿ ಅವರು ನೋಂದಣಿ ಇಲಾಖೆ 2023 ರಲ್ಲಿ ನಿಗಧಿ ಪಡಿಸಿರುವ ಬೆಲೆ ಅಡಿಗೆ 806 ರೂ ಇದೆ. ಇದು 5 ವರ್ಷಗಳಿಗೆ ಒಮ್ಮೆ ಬದಲಾಗುತ್ತದೆ. ಸಧ್ಯ ಹರಾಜು ಮಾಡಿರುವ ಬೆಲೆ 1210 ರೂ ಇದೆ. ನಿಯಮಗಳ ಪ್ರಕಾರ ಮೇಲ್ನೋಟಕ್ಕೆ ಅವ್ಯವಹಾರ ಎಂದು ಕಾಣುವುದಿಲ್ಲ. ಆದರೂ ವಾಸ್ತವ ಅಂಶಗಳನ್ನು ಪರಿಶೀಲಿಸಿ ವರದಿ ನೀಡಲಿದೆಂದರು.
ಈ ವೇಳೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ. ಇದರಲ್ಲಿ ನಿಯಮ ಮೀರಿ ಏನೂ ನಡೆದಿಲ್ಲ. ಹರಾಜು ಮೂಲಕ ನಡೆದಿದೆ. ತನಿಖೆಯ ನಂತರ ಸತ್ಯ ಹೊರ ಬರಲಿದೆ.
ಎಪಿಎಂಸಿಯ 40 ನಿವೇಶನಗಳನ್ನು 800 ರೂ ಗೆ ಚದರ ಅಡಿಯಂತೆ ಹರಾಜು ಕರೆದರೂ ಕೇವಲ 15 ಮಾತ್ರ ಹರಾಜಾಗಿವೆ. ಬೆಲೆ ಹೆಚ್ಚಳ ಆದರೆ ಯಾರು ತೆಗೆದುಕೊಳ್ಳುತ್ತಾರೆ. ನೋಂದಣಿ ಇಲಾಖೆ ನಿಗಧಿ ಪಡಿಸಿದಂತೆ ಹರಾಜು ಮಾಡಿದೆ. ಇನ್ನು ಅಲಾಟ್ ಮಾಡುವ 24 ಮೂಲೆ ನಿವೇಶನಗಳಿಗೆ ಜೇಷ್ಟತಾ ಆಧಾರದ ಮೇಲೆ ಅಲಾಟ್ ಮಾಡಲು 58 ಅರ್ಜಿ ಬಂದಿದ್ದವು. ಆದರೆ 2023 ರಲ್ಲಿ ಅರ್ಜಿ ಸಲ್ಲಿಸದವರು ನಮಗೆ ಆಧ್ಯತೆ ನೀಡಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮತ್ತು ಡಿಸಿಯವರು ಜು.29 ರಂದು ವಾಟ್ಸ್ ಅಪ್ ಮೆಸೇಜ್ ಮೂಲಕ ನಿಲ್ಲಿಸುವಂತೆ ಹೇಳಿದ್ದರಿಂದ ಈ ಪ್ರಕ್ರಿಯೆಯನ್ನು ಸಧ್ಯ ಸಂಪೂರ್ಣ ನಿಲ್ಲಿಸಿದೆಂದು ಹೇಳಿದರು.
ಇನ್ನು ಒಬ್ಬರು ಮಳಿಗೆ ಲೀಜ್ ಪಡೆದು ಮತ್ತೊಬ್ಬರಿಗೆ ಅಂಗಡಿ ನಡೆಸಲು ನೀಡಿರುವುದು. ಈ ಹಿಂದಿನಿಂದ ನಡೆದುಕೊಂಡು ಬಂದಿದೆ ಎಂಬುದನ್ನು ಒಪ್ಪಿಕೊಂಡ ಅವರು ಇದರ ಬಗ್ಗೆ ಹಾಗು ಕೃಷಿಯಲ್ಲದೆ ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ ಮಳಿಗೆಗಳ ಮಾಲೀಕರಿಗೆ ಈಗಾಗಲೇ ನೋಟೀಸ್ ನೀಡಿದೆ. ಇವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಿ ಎಂದು ಹೇಳಿದರು.





























