
ಆಶಾ ಗುರುಲಿಂಗಯ್ಯ ಕಾದಂಬರಿ ಆಧರಿಸಿದ ಚಿತ್ರಕ್ಕೆ ಚಾಲನೆ
ಹೆಣ್ಣಿನ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು, ಸಂಬಂಧಗಳ ನಡುವಿನ ನೋವು ಹಾಗೂ ಅದರಿಂದ ಹೊರಬರುವ ಹೋರಾಟವನ್ನು ಕೇಂದ್ರವಾಗಿಟ್ಟುಕೊಂಡು ‘ಮುಳ್ಳಿನ ಗುಲಾಬಿ’ ಸಿನಿಮಾ ರೂಪುಗೊಳ್ಳುತ್ತಿದೆ. ಆಶಾ ಗುರುಲಿಂಗಯ್ಯ ಅವರ ಇದೇ ಹೆಸರಿನ ಕಾದಂಬರಿ ಆಧರಿಸಿರುವ ಚಿತ್ರಕ್ಕೆ ಸ್ಟೈಲ್ ಶಿವು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಯ್ ಗೌಡ, ಆಶಾ, ಗಿರಿಜಾ ಲೋಕೇಶ್ ಹಾಗೂ ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸ್ವದೇಶಿ ದಿಶಾ ಕಂಪನಿಯ ಸಿಇಒ ಆಗಿರುವ ಆಶಾ ಗುರುಲಿಂಗಯ್ಯ, ಪದವಿ ಓದುತ್ತಿದ್ದಾಗಲೇ ಕಾದಂಬರಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದರು. ಸಂಕಷ್ಟದಲ್ಲಿದ್ದ ಹೆಣ್ಣುಮಗಳೊಬ್ಬಳ ಬದುಕನ್ನು ಕಂಡು ಪ್ರೇರಿತರಾಗಿ ಈ ಕಾದಂಬರಿ ಬರೆದಿದ್ದು, ಆಕೆಯ ಶಿಕ್ಷಣದ ಹೋರಾಟದಿಂದ ಹಿಡಿದು ವಿವಾಹದ ಬಳಿಕ ಎದುರಿಸುವ ಸಮಸ್ಯೆಗಳವರೆಗೆ ಕಥೆಯಲ್ಲಿ ಕಟ್ಟಿಕೊಡಲಾಗಿದೆ. ಕಾದಂಬರಿಗೆ ಬಿ.ಟಿ. ಲಲಿತಾನಾಯಕ್ ಮುನ್ನುಡಿ ಹಾಗೂ ಮೈಸೂರು ರಮಾನಂದ್ ಹಿನ್ನುಡಿ ಬರೆದಿದ್ದು, ಪ್ರಕಟವಾದಾಗ ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದೀಗ ಅದೇ ಕಥೆ ಬೆಳ್ಳಿತೆರೆಗೆ ಬರುತ್ತಿದೆ.
ನಿರ್ದೇಶಕ ಸ್ಟೈಲ್ ಶಿವು ಅವರಿಗೆ ಇದು ‘ನಿಸರ್ಗ’ ಬಳಿಕದ ಎರಡನೇ ಸಿನಿಮಾ. ಹಳೆಯ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿನ ಸಂಕಷ್ಟಗಳು ಮುಂದುವರಿದಿವೆ ಎಂಬ ಅಂಶವನ್ನು ಇಟ್ಟುಕೊಂಡು ಚಿತ್ರಕಥೆ ರೂಪಿಸಲಾಗಿದೆ. ಮೂಲ ಕಾದಂಬರಿಯ ಸುಮಾರು 80 ಪ್ರತಿಶತ ಅಂಶವನ್ನು ಉಳಿಸಿಕೊಂಡು ಚಿತ್ರಕಥೆ ಸಿದ್ಧಪಡಿಸಲಾಗಿದ್ದು, ಬೆಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಪಲ್ಲಕ್ಕಿ ಸಂಗೀತ ನೀಡುತ್ತಿದ್ದಾರೆ.
ನಿರ್ಮಾಪಕ ಅಜಯ್ ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ತೆರೆ ಮುಂದೆ ನಟಿಸುತ್ತಿದ್ದಾರೆ. ತಮ್ಮದು ಲವರ್ ಬಾಯ್ ಪಾತ್ರ ಎಂದು ಅವರು ಹೇಳಿದ್ದಾರೆ. ಚಿತ್ರಕಥೆ ಬರೆದಿರುವ ಎಂ.ಡಿ. ಕೌಶಿಕ್, ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ‘ಮುಳ್ಳಿನ ಗುಲಾಬಿ’ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ ಎಂದಿದ್ದಾರೆ.
ರೇಖಾದಾಸ್, ಅಪೂರ್ವ, ಮೈಸೂರು ರಮಾನಂದ್ ಹಾಗೂ ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ ಚಿತ್ರತಂಡದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಜೆಡಿಎಸ್ನ ವಿಜಯೇಂದ್ರ ಹಾಗೂ ಲಯನ್ಸ್ನ ಸತ್ಯವತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಶಿವಾನಂದ್ ಸಂಭಾಷಣೆ ಹಾಗೂ ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿದೆ.






















