
ಶಿವಮೊಗ್ಗ, ಜೂ,13- ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ, ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕಳೆದ ಏಪ್ರಿಲ್ 9 ರಂದು ಹುಲಿಕಲ್ ಘಾಟ್ನ ಹೇರ್ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ, ಸುಮಾರು 12 ಮೀಟರ್ ಎತ್ತರದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ 5 ಅಡಿಯಷ್ಟು ಭೂಕುಸಿತ ಉಂಟಾಗಿತ್ತು.
ರಸ್ತೆಯ ಮೇಲ್ಭಾಗದಲ್ಲೂ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿ ಕಟ್ಟೆಯಿಂದ ಹೊಸ ಅಂಗಡಿವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ನಂತರದ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚಂಡಿಕಾಂಬ ದೇವಸ್ಥಾನದ ಬಳಿ ಮೆಟ್ಟಿಲುಗಳನ್ನು ಬಳಸಿಕೊಂಡು ವಾಹನಗಳ ಅದಲು-ಬದಲು (ಷಟಲ್ ಸರ್ವೀಸ್) ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಪ್ರಸ್ತುತ ಘಾಟ್ ರಸ್ತೆಯ ತಿರುವಿನಲ್ಲಿ ತಡೆಗೋಡೆ ನಿರ್ಮಿಸಿ, ರಸ್ತೆಯ ಮಟ್ಟದವರೆಗೆ ಮಣ್ಣಿನ ಏರಿಯೊಂದಿಗೆ ಲೀನ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್, ಪೆÇಲೀಸ್ ಅಧೀಕ್ಷಕರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿ ಮತ್ತು ಪ್ರಸ್ತಾವನೆಯನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಘಾಟಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಾಟಿ ರಸ್ತೆಯಲ್ಲಿ ತಡೆಗೋಡೆ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಮಾಹಿತಿ ಮತ್ತು ಸೂಚನಾ ಫಲಕಗಳನ್ನು ಹಾಕಲಾಗಿದೆ.
ರಾತ್ರಿ ವೇಳೆ ವಾಹನ ಸವಾರರ ಅನುಕೂಲಕ್ಕಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್ಗಳನ್ನು ಅಳವಡಿಸಿ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.





























