
ಮನೋವೈಜ್ಞಾನಿಕ ಹಾರರ್ ಥ್ರಿಲ್ಲರ್ ಚಿತ್ರ
ಜೀವನದ ಆರಂಭದ ಹಿಂದಿರುವ ರಹಸ್ಯಗಳೇನು? ಪ್ರಕೃತಿಯ ಸಂಕೇತಗಳಿಗೂ ನಿಗೂಢ ಶಕ್ತಿಗಳಿಗೂ ಎಂಥ ಸಂಬಂಧ? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಸಿನಿಮೀಯ ರೂಪ ನೀಡಲು ಸಜ್ಜಾಗಿದೆ ರಮೇಶ್ ಅರವಿಂದ್ ಅಭಿನಯದ ‘ದೈಜಿ’. ಮನೋವೈಜ್ಞಾನಿಕ ಭಯಾನಕತೆ ಮತ್ತು ಅತೀಂದ್ರಿಯ ರಹಸ್ಯಗಳ ಸಮ್ಮಿಲನವಾಗಿರುವ ಈ ಚಿತ್ರವು 2027ರ ಜನವರಿ 14ರಂದು ಮಕರ ಸಂಕ್ರಾಂತಿಯಂದು ರಾಜ್ಯಾದ್ಯಂತ ತೆರೆಕಾಣಲಿದೆ.
ರಮೇಶ್ ಅರವಿಂದ್ ಅವರ 106ನೇ ಚಿತ್ರ ಇದಾಗಿದ್ದು, ರವಿ ಕಶ್ಯಪ್ ಮತ್ತು ಸುಧಾ ಕಶ್ಯಪ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ‘ಶಿವಾಜಿ ಸುರತ್ಕಲ್’ ಸರಣಿಯ ಮೂಲಕ ಗಮನ ಸೆಳೆದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಮ್ಮೆ ಒಂದಾಗಿರುವುದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ನಿರ್ಮಾಪಕ ರವಿ ಕಶ್ಯಪ್ ತಿಳಿಸಿರುವ ನೈಜ ಘಟನೆಗಳ ಆಧಾರದಲ್ಲಿ ಕಥೆ ರೂಪುಗೊಂಡಿದ್ದು, ಅಭಿಜಿತ್ ವೈ.ಆರ್. ಮತ್ತು ಆಕಾಶ್ ಶ್ರೀವತ್ಸ ಚಿತ್ರಕಥೆ ರಚಿಸಿದ್ದಾರೆ.
ಚಿತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ದಿಗಂತ್ ಮಂಚಾಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅವಿನಾಶ್, ಬಿ.ಎಂ. ಗಿರಿರಾಜ್, ಅಲೆಕ್ಸಾಂಡರ್ ಟೈಲರ್ ಮತ್ತು ಸ್ಯಾಂಡಿ ಹಿಗಿನ್ಸ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
‘ದೈಜಿ’ಯ ಕಥನದಲ್ಲಿ ಸೂರ್ಯಕಾಂತಿ ಹೂವು ಪ್ರಮುಖ ಸಂಕೇತವಾಗಿ ಮೂಡಿಬಂದಿದೆ. ಸೂರ್ಯನ ಬೆಳಕು, ಜೀವಚೈತನ್ಯ ಮತ್ತು ಭರವಸೆಯನ್ನು ಪ್ರತಿನಿಧಿಸುವ ಈ ಹೂವು, ಮಗುವಿನ ಜನನದ ಸುತ್ತ ಹೆಣೆದಿರುವ ನಿಗೂಢ ಘಟನೆಗಳಿಗೆ ವಿಶೇಷ ಅರ್ಥ ನೀಡುತ್ತದೆ. ಚಿತ್ರದ ಪ್ರಮುಖ ಪಾತ್ರಗಳಾದ ಸೂರ್ಯ, ಭೂಮಿ ಮತ್ತು ಗಗನ ಎಂಬ ಹೆಸರುಗಳೂ ಪ್ರಕೃತಿಯೊಂದಿಗಿನ ಕಥೆಯ ನಂಟನ್ನು ಬಿಂಬಿಸುತ್ತವೆ.
ಸಂಕ್ರಾಂತಿಯು ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತವಾದರೆ, ‘ದೈಜಿ’ ಬದುಕಿನ ಒಳಪದರಗಳಲ್ಲಿ ಅಡಗಿರುವ ಕತ್ತಲೆಯ ರಹಸ್ಯಗಳನ್ನು ಶೋಧಿಸುವ ಪ್ರಯತ್ನ ಮಾಡುತ್ತದೆ. ಹಬ್ಬದ ಹಿನ್ನೆಲೆಗೆ ಹೊಂದುವಂತೆ ಸೂರ್ಯನ ಪಥ, ಸೂರ್ಯಕಾಂತಿಯ ಸಂಕೇತ ಹಾಗೂ ಜೀವನದ ನಿಗೂಢತೆಗಳನ್ನು ಬೆಸೆಯುವ ಕಥಾವಸ್ತು ಚಿತ್ರದ ವಿಶೇಷ ಆಕರ್ಷಣೆಯಾಗಿದೆ.
ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಮತ್ತು ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ವಿಭಿನ್ನ ಸಂಗೀತ ಶೈಲಿಗಳೊಂದಿಗೆ ಹಿನ್ನೆಲೆ ಸಂಗೀತಕ್ಕೂ ಆದ್ಯತೆ ನೀಡಲಾಗಿದೆ. ಶ್ರೀಶ ಕುದುವಳಿ ಛಾಯಾಗ್ರಹಣ, ಆಕಾಶ್ ಶ್ರೀವತ್ಸ ಸಂಕಲನ ನಿರ್ವಹಿಸಿದ್ದಾರೆ. ಸುನಯನ ಕಾಸ್ಟಿಂಗ್ ನಿರ್ದೇಶನ ಹಾಗೂ ಲಕ್ಷ್ಮೀ ಕೃಷ್ಣ ವಸ್ತ್ರ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.



















