
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.09: ಕರ್ನಾಟಕದಲ್ಲಿ ಅನ್ನ ಅಕ್ಷರ ದಾಸೋಹದ ಕ್ರಾಂತಿ ನಡೆಸಿ ಬ್ರಾಹ್ಮಣೇತರರಿಗೆ ಶಿಕ್ಷಣ ನೀಡಿದ ಕಾರ್ಯವನ್ನು ವೀರಶೈವ ಲಿಂಗಾಯತ ಸಮಾಜ ಸಂಘ ಸಂಸ್ಥೆಗಳು ಮಾಡಿವೆ ಎಂದು ನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಹೇಳಿದರು.
ಅವರು ನಿನ್ನೆ ಸಂಜೆ ನಗರದ ವೀರಶೈವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವದ ಮೊದಲ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕಳೆದ ಒಂದು ಶತಮಾನದಲ್ಲಿ ಈ ರಾಜ್ಯದ ಜನತೆಗೆ ಶಿಕ್ಷಣ ನೀಡುವಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸೇವೆ ಸ್ಮರಣೀಯ. ಈ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ನೀಡುವಲ್ಲಿ ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು
ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತರೇ ಶಿಕ್ಷಣ ಸಂಸ್ಥೆಗಳಂತೆ ಕೋಟಿಗಟ್ಟಕೆ ಆದಾಯ ಮಾಡದೆ. ಕೋಟಿಗಟ್ಟಲೆ ಮಕ್ಕಳಿಗೆ ವಿದ್ಯಾದಾನ ಮಾಡಿದೆ. ನಮ್ಮ ಇಂಜಿನಿಯರಿಂಗ್ ಕಾಕೇಜಿನಲ್ಲಿ ಮಾತ್ರ ಬಡ ಮಕ್ಕಳು ಕಡಿಮೆ ಶುಲ್ಕದಲ್ಲಿ ವಿಧ್ಯೆ ಪಡೆಯುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ. ಸರ್ಕಾರ ನಮ್ಮ ಶಾಲೆಗಳಲ್ಲಿ ಅಗತ್ಯ ಸಿಬ್ಬಂದಿ ನೀಡದಿದ್ದರೂ ಸಂಘದಿಂದಲೇ ವೇತನ ಭರಿಸಿ ವಿದ್ಯಾ ದಾನ ಮಾಡಿತ್ತುದೆಂದರು.
ಸಾನಿದ್ಯವಹಿಸಿದ್ದ ಕಲ್ಯಾಣ ಮಠದ ಶ್ರೀಗಳು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಉದ್ದೇಶದಿಂದ ಆರಂಭವಾಗಬಾರದು. ಅಕ್ಷರಾ ದಾಸೋಹ ಎಂದು ಶಾಲಾ ಕಾಲೇಜುಗಳನ್ನು ನಡೆಸುವ ಕೆಲಸ ಆಗಬೇಕು ಅದನ್ನು ವೀರಶೈವ ವಿದ್ಯಾವರ್ಧಕ ಸಂಘ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ವೇದಿಕೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಿಗೆ, ಶಾಲೆಯ, ಆಡಳಿತ ಮಂಡಳಿ ಅಧ್ಯಕ್ಷ ಯಾಳ್ಪಿ ಪಂಪನಗೌಡ ಮತ್ತು ಸದಸ್ಯರಿಗೆ, ಭೋದಕ, ಭೋದಕೇತರ ಸಿಬ್ಬಂದಿಗೆ ಗೌರವ ಸನ್ಮಾನ ನೆರವೇರಿರಿಸಲಾಯ್ತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಖಜಾಂಚಿ ವದ್ದಿಗೇರಿ ಎರ್ರಿಸ್ಚಾಮಿ ಮೊದಲಾದವರು ಇದ್ದರು
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವರಕನಹಳ್ಳಿ ಮೋಹನ್ ರೆಡ್ಡಿ ಸ್ವಾಗತ, ಗುಡೇಕೋಟೆ ನಾಗರಾಜ್ ವಂದನಾರ್ಪಣೆ ಮಾಡಿದರು.
ಈ ವೇಳೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಮತ್ತು ಶರಣ ಸಕ್ಕರೆ ಕರಡೀಶ ನಾಟಕ ಪ್ರದರ್ಶನ ನಡೆಯಿತು.































