
ಸಂಜೆವಾಣಿ ವಾರ್ತೆ
ಹೊಸಪೇಟೆ.ನ.೧೩: ವಿದ್ಯಾರ್ಥಿಗಳಿಗೆ ಓದು, ಶಿಕ್ಷಣ ಮಾತ್ರ ಮುಖ್ಯವಲ್ಲ, ಭಾರತದ ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಹೊಂದುವುದು ಅತ್ಯಂತ ಅವಶ್ಯಕ. ಭವ್ಯ ಭಾರತದ ನಿರ್ಮಾತೃಗಳಾದ ಯುವ ಸಮೂಹ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹೇಳಿದರು.
ನಗರದ ಜಿಲ್ಲಾ ಒಳಕ್ರಿಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಯುವ ಸಂಸತ್ತು-೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ವಾಕ್ ಸ್ವಾತಂತ್ರö್ಯ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅಣಕು ಯುವ ಸಂಸತ್ತು ಕಾರ್ಯಕ್ರಮವು ಸಹಾಯವಾಗುತ್ತದೆ. ಯುವ ಸಮೂಹ ವಿದ್ಯಾರ್ಥಿ ಹಂತದಲ್ಲಿಯೇ ಸಕ್ರಿಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ಉತ್ತಮ ನಾಯಕತ್ವ ರೂಪುಗೊಳ್ಳಲು ಸಹಾಯಕವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದರ ಜೊತೆಗೆ ದೇಶ ಕಟ್ಟುವ ದೊಡ್ಡ ಜವಾಬ್ದಾರಿ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಜವಬ್ದಾರಿಯುತ ಉತ್ತಮ ನಾಗರೀಕರಾಗಿ ಬೆಳೆಯಬೇಕು. ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆ ಅಥವಾ ಸರ್ಕಾರದ ಆಡಳಿತಕ್ಕೆ ಸೀಮಿತವಾಗಿಲ್ಲ. ಜನರ ಅಭಿಪ್ರಾಯಗಳಿಗೆ ಗೌರವ ನೀಡುವುದು, ಭಿನ್ನಮತಗಳನ್ನು ಪ್ರಜಾಸತ್ತಾತ್ಮಕವಾಗಿ ಚರ್ಚಿಸುವುದು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವುದು ಪ್ರಜಾಪ್ರಭುತ್ವದ ನಿಜವಾದ ಆಶಯವಾಗಿದೆ ಎಂದರು.
ಡಾ|ಬಿ.ಆರ್.ಅAಬೇಡ್ಕರ್ ಅವರು ಪ್ರಜಾಪ್ರಭುತ್ವವನ್ನು ಸಹಬಾಳ್ವೆಯ ಜೀವನ ವಿಧಾನವೆಂದು ಪ್ರತಿಪಾದಿಸಿದ್ದಾರೆ. ನಾವೆಲ್ಲರೂ ಸಮಾನತೆ, ಸಹೋದರತ್ವ ಮತ್ತು ಒಗ್ಗಟ್ಟಿನಿಂದ ಮುನ್ನಡೆಯಲು ಪ್ರಜಾಪ್ರಭುತ್ವವೇ ಬುನಾದಿಯಾಗಿದೆ. ನೆಲ್ಸನ್ ಮಂಡೇಲಾ ಅವರ ಆಶಯದಂತೆ ಶಿಕ್ಷಣ ಮತ್ತು ಯುವಶಕ್ತಿಗೆ ಸಮಾಜ ಹಾಗೂ ಜಗತ್ತನ್ನು ಬದಲಾಯಿಸುವ ಸಾಮರ್ಥ್ಯವಿದೆ. ಮಹಾತ್ಮ ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ನನಸು ಮಾಡಲು ಯುವಕರು ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವಾರ್ ಅವರು ಮಾತನಾಡಿ, ಭಾರತೀಯ ಸಂವಿಧಾನದ ಪ್ರಸ್ತಾವನೆಯು ಅತ್ಯಂತ ಮೌಲ್ಯಯುತವಾಗಿದೆ. ಮತ್ತು ಅದರಲ್ಲಿ ಅಳವಡಿಸಿರುವ ಪ್ರತಿ ಶಬ್ಧವು ಭಾರತದ ಬಲಿಷ್ಠತೆಯನ್ನು, ಉತ್ಕೃಷ್ಠತೆಯನ್ನು ಮತ್ತು ಗೌರವನ್ನು ಎತ್ತಿ ತೋರಿಸುತ್ತದೆ. ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಗೊಳ್ಳಲು ಅಗತ್ಯವಿರುವ ಎಲ್ಲಾ ಅಂಶ ಮತ್ತು ಅಗತ್ಯಗಳನ್ನು ವಿಧಿಗಳ ಸ್ವರೂಪದಲ್ಲಿ ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿ ಹಂತದಲ್ಲಿಯೇ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಅನ್ಯಾಯ, ಶೋಷಣೆ, ತಾರತಮ್ಯ ಹಾಗೂ ಅಸಮಾನತೆಗಳನ್ನು ಸಮರ್ಥವಾಗಿ ತೊಲಗಿಸಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಮತ್ತು ಸಮಾನ ಅವಕಾಶಗಳನ್ನು ಪಡೆದುಕೊಳ್ಳಲು ಯುವಕರಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜಾತಿ, ಧರ್ಮ, ಲಿಂಗ ಸೇರಿದಂತೆ ಯಾವುದೇ ಆಧಾರದ ಮೇಲೆ ತಾರತಮ್ಯ ಇರಬಾರದು. ಸಮಾಜದಲ್ಲಿ ಸಮಾನತೆ ನೆಲೆಸಿದಾಗ ಮಾತ್ರ ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಯ ಅವಕಾಶಗಳು ಲಭ್ಯವಾಗಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಜೊತೆಗೆ ಸಮಾಜದ ಬಗೆಗಿನ ಕರ್ತವ್ಯಗಳನ್ನೂ ಅರಿತುಕೊಳ್ಳಬೇಕು. ಅನಕ್ಷರತೆ, ಬಡತನ, ಮೂಢನಂಬಿಕೆ, ದೇವದಾಸಿಯಂತಹ ಅನಿಷ್ಟ ಪದ್ಧತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಣಕು ಸಂಸತ್ತು ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ೪೫ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೨೨೪ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇದು ಕರ್ನಾಟಕ ವಿಧಾನ ಸಭೆಯ ೨೨೪ ವಿಧಾನಸಭಾ ಸದಸ್ಯರ ಪ್ರಾತಿನಿಧಿಕ ಘಟಕದಂತೆ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಗರಿಮಾ ಪನ್ವಾರ್ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ.ಎ.ಕಾಳೆ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ್ ನಾಗರಾಜ, ಸಮಾಜ ಕಲ್ಯಾಣ ಇಲಾಖೆಯ ಹೊಸಪೇಟೆ ತಾಲ್ಲೂಕು ಸಹಾಯಕ ನಿರ್ದೇಶಕಿ ನಜಿಮಾ ಭಾನು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ ರಾಮಚಂದ್ರಪ್ಪ, ವಿಷಯ ಪರಿವೀಕ್ಷಕ ಹೆಚ್.ಎಂ.ಹುಲಿಬAಡಿ, ಪ್ರೊ.ಕೆ.ಬಾಬು ರಾಜೇಂದ್ರ ಪ್ರಸಾದ್, ನಾಗರಾಜ್ ಹವಲ್ದಾರ್, ಬಸವಂತಯ್ಯ ಸೇರಿದಂತೆ ಇತರರು ಇದ್ದರು. ಶಿಕ್ಷಕ ನಾಗರಾಜ ಎಸ್. ಕಾರ್ಯಕ್ರಮ ನಿರೂಪಿಸಿದರು. ನಿಲಯ ಪಾಲಕ ಕೊಟ್ರೇಶ್ ಹಕ್ಕಂಡಿ ಅವರು ವಂದಿಸಿದರು.
ಅಣಕು ಸಂಸತ್ತು :
ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲೆ, ಪದವಿ ಪೂರ್ವ ಮಹಾವಿದ್ಯಾಲಯ, ಪದವಿ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ ಮತ್ತು ಬಿಎಡ್ ಮಹಾವಿದ್ಯಾಲಯ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು ಮತ್ತು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸಭ್ಯಾಧ್ಯಕ್ಷರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು ಸೇರಿದಂತೆ ವಿವಿಧ ಸಾಂವಿಧಾನಿಕ ಹುದ್ದೆಗಳಲ್ಲಿ ಭಾಗವಹಿಸಿ, ಸಮರ್ಥವಾಗಿ ಮತ್ತು ಸಮರ್ಪಕವಾಗಿ ಪಾತ್ರ ನಿರ್ವಹಿಸಿದರು.
ಮಾದರಿ ಅಧಿವೇಶನದಲ್ಲಿ ಸಭ್ಯಾಧ್ಯಕ್ಷರ ಆಗಮನ, ಶಾಸಕರ ಪ್ರಮಾಣ ವಚನ ಸ್ವೀಕಾರ, ಆಗಲಿದ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಕೆ, ಮೌನಚರಣೆ ಸಲ್ಲಿಕೆ, ಪ್ರಶ್ನೋತ್ತರ ಕಾರ್ಯಕಲಾಪ, ಶೂನ್ಯ ವೇಳೆ ಚರ್ಚೆ, ಗಮನ ಸೆಳೆಯುವ ಸೂಚನೆ, ತುರ್ತು ವಿಷಯಗಳ ಚರ್ಚೆ, ಮಸೂದೆ ಮಂಡನೆ ಹಾಗೂ ಚರ್ಚೆ ಸೇರಿದಂತೆ ಸಂಸದೀಯ ವ್ಯವಸ್ಥೆಯ ಎಲ್ಲಾ ಹಂತಗಳನ್ನು ಪರಿಣಾಮಕಾರಿಯಾಗಿ ಪಾಲಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಇಂದಿನ ಯುವ ಸಂಸತ್ತು ಕಾರ್ಯಕ್ರಮದಲ್ಲಿ ತುಂಗಭದ್ರ ಜಲಾಶಯ, ಹಂಪಿ ಸ್ಮಾರಕ ಸಂರಕ್ಷÀಣೆ, ಗ್ರಾಮ ಪಂಚಾಯತ್ ಮೂಲ ಸೌಕರ್ಯಗಳ ಪೂರೈಕೆ, ದೇವದಾಸಿ ಪದ್ದತಿ ನಿಯಂತ್ರಣ ಮತ್ತು ನಿರ್ಮೂಲನೆ ಹಾಗೂ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯ ಕುರಿತು ಯುವ ಶಾಸಕರು, ಮಂತ್ರಿ ಮಂಡಳದ ಸದಸ್ಯರು ಸುಧಿರ್ಘವಾಗಿ ಚರ್ಚಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತು ಮುನ್ನೋಟದ ಬೆಳಕು ಚೆಲ್ಲಿದರು.
ರಾಜ್ಯಮಟ್ಟಕ್ಕೆ ಆಯ್ಕೆ:
ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಯಶ್ವಸಿಯಾಗಿ ವಾದ ಮಂಡಿಸಿ ಕ್ರಿಯಾಶೀಲವಾಗಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ವಿಜಯನಗರ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು.
ಕೂಡ್ಲಿಗಿ ತಾಲ್ಲೂಕಿನ ಕೆ.ಬಿ.ಮಹೇಶ್, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಟಿ.ಎಂ.ಅನುಷಾ, ಹೂವಿನಹಡಗಲಿ ತಾಲ್ಲೂಕಿನ ಗಾಯಿತ್ರಿ ಬಾವಿಕಟ್ಟಿ, ಹರಪನಹಳ್ಳಿ ತಾಲ್ಲೂಕಿನ ಅಭಿಷೇಕ್, ಹೊಸಪೇಟೆ ತಾಲ್ಲೂಕಿನ ಕು.ಚಿರು ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಹೊಸಪೇಟೆ ಸರ್ಕಾರಿ ಬಾಲಕಿಯರ ಕಾಲೇಜಿನ ವಿನಯ ಕುಮಾರ್, ಮರಿಯಮ್ಮನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೋಭಾ, ಕಾರಿಗನೂರು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶಿವಪ್ರಸಾದ್, ಕಮಲಾಪುರ ಸರ್ಕಾರಿ ಪ್ರೌಢ ಶಾಲೆಯ ರಮಿಜಾಸಹಾ, ಶಂಕರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕ ಚಂದ್ರಶೇಖರ್. ಹೆಚ್ ಮತ್ತು ವಿಜಯನಗರ ಮಹಾವಿದ್ಯಾಲಯದ ರಾಜ್ಯಶಾಸ್ತçದ ಉಪನ್ಯಾಸಕ ಅಭಿನಂದನ್ ಜೋಶಿ.ಎಂ. ಭಾಗವಹಿಸಿದ್ದರು.





















