
ಸಂಜೆವಾಣಿ ನ್ಯೂಸ್
ಮೈಸೂರು, ಮೇ.20:- ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡುವಂತೆ ಆಗ್ರಹಿಸಿ ಶಿಷ್ಯವೇತನರಹಿತ ಸಂಶೋಧಕರ ಬಳಗದ ನೇತೃತ್ವದಲ್ಲಿ ಮೈಸೂರು ವಿ.ವಿ ಕ್ರಾಫರ್ಡ್ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ವಿ.ವಿ ವ್ಯಾಪ್ತಿಯ ಕಾಲೇಜುಗಳು ಹಾಗೂ ಮಾನಸಗಂಗೋತ್ರಿಯಲ್ಲಿ ಪಿಎಚ್.ಡಿ. ಪ್ರವೇಶ ಪಡೆದು ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು 2026-27ನೇ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕದ ಅಡಿಯಲ್ಲಿ ನೀಡುವ ಶಿಷ್ಯವೇತನಕ್ಕೆ 96 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಮೈಸೂರು ವಿ.ವಿ ಕೇವಲ 20 ಸಂಶೋಧಕರಿಗೆ ಮಾತ್ರ ಶಿಷ್ಯವೇತನ ನೀಡುವ ವಿದ್ಯಾರ್ಥಿ ವಿರೋಧಿ ನಿಯಮ ರೂಪಿಸಿದೆ. ಇದರಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಶಿಷ್ಯವೇತನವಿಲ್ಲದೆ ಪಿಎಚ್.ಡಿ. ಪದವಿ ಪೂರ್ಣಗೊಳಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ವರ್ಷಕ್ಕೆ 23 ಕೋಟಿ ರೂ.ಗಳನ್ನು ಅನಗತ್ಯವಾಗಿ ವ್ಯಯಿಸಲಾಗುತ್ತಿದ್ದು, ಇದು ವಿಶ್ವವಿದ್ಯಾನಿಲಯದ ಹಣ ದುರ್ಬಳಕೆಗೆ ನಿದರ್ಶನ. ಜೊತೆಗೆ, ಈ ವರ್ಷದ ವಿ.ವಿ ಬಜೆಟ್ನ ಒಟ್ಟು 400 ಕೋಟಿ ರೂ.ಗಳಲ್ಲಿ ನಿಯಮಾವಳಿಯಂತೆ ಶೇ.24ರಷ್ಟು ಎಸ್ಸಿ, ಎಸ್ಟಿ ಉಪಯೋಜನೆಗಳಿಗೆ ಮೀಸಲಿಟ್ಟರೆ 96-97 ಕೋಟಿ ರೂ. ನೀಡಬೇಕು. ಆದರೆ, ವಿಶ್ವವಿದ್ಯಾನಿಲಯ ಎಸ್ಸಿ, ಎಸ್ಟಿ ಸಂಶೋಧನೆಗೆ ಯಾವುದೇ ಹಣವನ್ನು ನಿಗದಿಪಡಿಸದೆ ಅನ್ಯಾಯ ಮಾಡುತ್ತಿದೆ. ಕೂಡಲೇ ಪ್ರಸಕ್ತ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಸಂಶೋಧಕರಿಗೂ ಭೇದಭಾವವಿಲ್ಲದೆ ಶಿಷ್ಯವೇತನವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಚಾಲಕರಾದ ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್, ದೀಪ, ಮೌನ ದೊರೆ, ಧೀರಜ್, ನವೀನ್, ಬಿ.ಎನ್.ವಿಶಾಖ್, ಸಣ್ಣಮಾದು, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.























