
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದರಲ್ಲಿ ಬಹುತೇಕ ಸೌಲಭ್ಯಗಳು ಮನೆಯ ಯಜಮಾನಿ ಪರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ದೇವರಾಜ ಅರಸು ಹಿಂದುಳಿದ ನಿಗಮದ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮಹಿಳೆ ಪ್ರತೀ ಕುಟುಂಬದ ಯಜಮಾನಿಯಾಗಿರುತ್ತಾಳೆ, ಮಹಿಳೆಯ ಕೈಗೆ ಸರ್ಕಾರದ ಸೌಲಭ್ಯ ದೊರೆತಲ್ಲಿ ಅದು ಕುಟುಂಬದ ಅಭಿವೃದ್ದಿಗೆ ಕಾರಣವಾಗುತ್ತದೆ ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುತೇಕ ಯೋಜನೆಗಳು ಮಹಿಳಾ ಪರವಾಗಿದೆ. ಇಷ್ಟು ವರ್ಷದಲ್ಲಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕೇವಲ ಹೊಲಿಗೆ ಯಂತ್ರ ಮಾತ್ರವಲ್ಲ ಮಹಿಳಾ ಸ್ವಉದ್ಯೋಗಕ್ಕೆ ಮೂರು ಲಕ್ಷದ ತನಕ ಸಾಲ ದೊರೆಯುತ್ತಿದೆ. ಇದರಲ್ಲಿ ಎರಡು ಲಕ್ಷ ಸಬ್ಸಿಡಿ ಮೊತ್ತವನ್ನು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮಿ, ಶಕ್ತಿ ಯೋಜನೆಯನ್ನು ಸರಕಾರ ಮಹಿಳೆಯರಿಗೆ ನೀಡಿದೆ ಇದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.
೨೫ ಯಂತ್ರ ವಿತರಣೆ
ಕಾರ್ಯಕ್ರಮದಲ್ಲಿ ಸುಮಾರು ೨೫ ಮಂದಿ ವಿವಿಧ ಗ್ರಾಮಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಇಲಾಖಾಧಿಕಾರಿ ಜಯಶ್ರೀ ಸ್ವಾಗತಿಸಿದರು. ಶಾಸಕರ ಕಚೇರಿ ಸಹಾಯಕ ಲಿಂಗಪ್ಪ ವಂದಿಸಿದರು.
ಮೂಲೆಗೆ ಎಸೆಯಬೇಡಿ
ಉಚಿತವಾಗಿ ಹೊಲಿಗೆ ಯಂತ್ರ ಸಿಕ್ಕಿದೆ ಎಂದು ಮೂಲೆಗೆ ಎಸೆಯಬೇಡಿ. ಅದನ್ನು ಬಳಸಿಕೊಳ್ಳಬೇಕು. ಫ್ಯಾಷನ್ ಯುಗದಲ್ಲಿ ಮಹಿಳೆಯರ ವಿವಿಧ ಬಟ್ಟೆಗಳ ಸ್ಟಿಚ್ಚಿಂಗ್ ಕಲಿತಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಮಹಿಳೆಯರು ಮನೆಯಲ್ಲೇ ಇದ್ದು ಟೈಲರಿಂಗ್ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು- ಅಶೋಕ್ ರೈ ಶಾಸಕರು.





























